Friday, December 4, 2020

 ಕಳೆದು ಹೋದ ಕವನಗಳ ಹುಡುಕಿ ತರುವ ಯತ್ನದಲ್ಲಿ,

ಮರೆತು ಹೋದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ,

ಮಂಪರಿನಿಂದ ಮುದುಡಿ ಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||


ಎಂದೋ ಅರ್ಥೈಸಿದ ಮೊದಲ ಚರಣವೇ ತಿಳಿಯುತ್ತಿಲ್ಲ !

ಇನ್ನು ಕೊನೆಯ ಸಾಲುಗಳ ಮಾತೆಲ್ಲಿ ?


ಬರೆಯುವುದ ಬಿಟ್ಟರೆ ಶಬ್ದಗಳೂ ಬದುಕವು ತಲೆಯೊಳಗೆ,

ಈಗ ಬರೆಯಬೇಕೆಂದರೂ ಬಾರವು ಲೇಖನಿಯ ತುದಿಗೆ |


ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||


ನಾನೇ ಗೀಚಿದ ಸಾಲುಗಳು, ಕೇಳಿದಂತಿವೆ;

ನನಗೂ-ನಿನಗೂ ಎಲ್ಲಿಯ ಸಂಬಂಧ!?


ಕದನವೊಂದು ಒಡಮಾಡಿದೆ ಮನದ ಮೂಲೆಯಲಿ,

ಸಂಧಾನವಾಗದಿರೆ ಯುದ್ಧವಾದೀತು !


ಯಾವುದು ಮುಖ್ಯ ಕವಿತೆಗೆ; ಶಬ್ದವೋ? ಸಾರಾಂಶವೋ?


ದನಿಯೊಂದು ಉಸುರಿತು, ಮನದ ಮೂಲೆಯಲಿ;

ಶಬ್ದ ಬರಿ ಸಂವಹನ ಮಾಧ್ಯಮ,

ಬಾಹ್ಯ ಸೌಂದರ್ಯಕ್ಕೆ ಮರುಳಾಗಾದಿರು ಮೂಢ!

ಕಣ್ಣಿನಲಿ ಹೇಳುವ ಕವಿತೆಗೆ ಅಕ್ಷರ ಮಾಲೆ ಬೇಕೇನು?


ಇನ್ನಾವುದೋ ಅರಚುತಿಹುದು !

ಶಬ್ದಗಳೇ ಅಲ್ಲವೇ ಕಾವ್ಯಕ್ಕೆ ಶೃಂಗಾರ,

ಶೃಂಗಾರವಿರದ ಸಪ್ಪೆಯ ಮೂಸುವುದು ಯಾರಾ?


ಆದರೆನ್ನ ಬುದ್ಧಿಗೆ ಜಾಣ ಕಿವುಡು ! ||


ಕಾವ್ಯ ಸೃಷ್ಠಿಯ ಕದನದಲಿ ಪದಗಳಿಗೆ ದನಿಯಿಲ್ಲ,

ಎಷ್ಟು ಹೆಕ್ಕಿ-ಹುಡುಕಿದರೂ ಶಬ್ದಗಳೇ ಸಿಗುತ್ತಿಲ್ಲ |


ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ !


ಹೊಸದಾಗಿ ಹೊಸೆಯಬೇಕಿದೆ ಅವೇ ಹಳೆಯ ಶಬ್ದಗಳ|

ಮೂಡಿಬರಬೇಕಾಗಿದೆ ಮುಂಜಾನೆ ಕವಿತೆ; ಗೋಧೂಳಿ ಕವನ,

ಏನಾದರಾಗಲಿ ಶುರು ಮಾಡಬೇಕಿದೆಯಣ್ಣ;

ಅರ್ಧ ಬರೆದ ಕವಿತೆ ||


No comments:

Post a Comment