Saturday, February 17, 2018

ಅಂಕು ಡೊಂಕಾದ ಹಾದಿಯಲಿ,
ಮಳೆಗಾಲದಲ್ಲೊಂದು ತೊರೆ ಹುಟ್ಟಿ,
ಹರಿವ ನೀರಿಗೆ ಕಲ್ಲು ಮಣ್ಣಿನ ಒಡ್ಡು ಕಟ್ಟಿ,
ಹಳೆಯ ಪುಸ್ತಕದ ಹಾಳೆಯಲಿ ಹಡಗು ಮಾಡಿ - ಅದೂ ಗಂಡು ಹೆಣ್ಣಿನ ಜೋಡಿ !
ಅರ್ಧ ಮುಳುಗಿದ ಹಡಗಿಗೆ ಹೊರಲಾರದ ಭಾರ ಹೊರಿಸಿ
ಯಾವ ಸಮುದ್ರ ಯಾನಕ್ಕೂ ಕಡಿಮೆಯಲ್ಲ ನಮ್ಮ ಸಾಧನೆ

ಕಟ್ಟಿದ ಒಡ್ಡಿಗೊಂದು ಕಳ್ಳಗಿಂಡಿಯ ಕೊರೆದು,
ನೀರು ಹರಿಯಲೊಂದು ಕಾಲುವೆ, ಅಲ್ಲಲ್ಲಿ ಕವಲೊಡೆದ ಹರಿವಿನಿಂದಾದ ನಡುಗಡ್ಡೆ
ಬುಡ ಸಮೇತ ಕಿತ್ತು ತಂದು ನೆಟ್ಟ ಗಿಡಗಳು ನಡುಗಡ್ಡೆಯ ನೆತ್ತಿಯ ಮೇಲೆ !
ವ್ಯವಸಾಯ, ವ್ಯಾಪಾರ, ಮನೆ ಮಡದಿ ಮಕ್ಕಳು ;
ದಿನಕ್ಕೊಂದು ನಾಗರಿಕತೆಯ ಹುಟ್ಟು, 
ಈ ಬೇಡದ ದುಡ್ಡಿಗಾಗಿ, ಬೇಕಾಬಿಟ್ಟಿ ಖರ್ಚಾಗಿದೆ ಜೀವನ
ಚಿಂತೆ ಹತ್ತಿದೆ ನನಗೆ ಏನು ಮಾಡುವುದು ಇಷ್ಟೆಲ್ಲ ಹಣವನ್ನ,
ತಿರುಗಿ-ತಿಂದು-ತೆಗಿ ಹೊಟ್ಟೆ ಬಿರಿದೂ ಹೆಚ್ಚಾಗಿದೆ !

ಇಲ್ಲ ಸಲ್ಲದ ಆಸೆಗಳ ಕಿಡಿ ಹೊತ್ತಿಸಿ, ಕಿಡಿ ಕಾಳ್ಗಿಚ್ಚಾಗಿ ಕೆರಳಿದೆ
ಆರಿಸಲು ಬೇಕಾದ ನೀರಿಗೆ ಹಣ ಸಾಲದು ! ಮತ್ತೆ ದುಡಿಯಬೇಕು ಕತ್ತೆಯಂತೆ
ನೂರು ಸಹಸ್ರ ದೀಪಗಳ ಬೆಳಗುವುದಲ್ಲ ದೀಪಾವಳಿ,
ಹೊಗೆಯೆಬ್ಬಿಸಿ ಕೆಮ್ಮಿ ಕಿರಿಚಾಡುವುದಲ್ಲ ದೀಪಾವಳಿ,
ಹಚ್ಚಬೇಕಿರುವುದು ಒಂದೇ ಹಣತೆ !
ಬದುಕಿನ ಬತ್ತಿಯ ಸ್ನೇಹ ಪ್ರೀತಿಯಲಿ ಅದ್ದಿ,
ಜೀವನಾಸಕ್ತಿಯ ಕಿಡಿಯನು ಹಚ್ಚಿ,
ಬೇಡದ-ಬಿಡದ ಬೀರುಗಾಳಿಯ ಮೆಟ್ಟಿ ನಿಲ್ಲುವ
ಬಣ್ಣದ ಬೆಳಕಿನ ಪುಟ್ಟ ಹಣತೆ 
ಭೂಮಿಗೆ ಸೀಮಿತವಲ್ಲ ಈ ಭೇದ ಭಾವ,
ಅಕಾಶದೆತ್ತರಕೂ ಹರಡಿದೆ |
ಬೆಳ್ಳಿ ಮೋಡಗಳೆಲ್ಲ ನಲಿದಾಡುತಿವೆ ಬಾನಂಗಳದಿ,
ಕಣ್ಣೀರಾಗಿ ಕರಗುವುದು ಕರಿ ಮೋಡಗಳ ಕರ್ಮ !
ಹುಚ್ಚೆದ್ದು ಉಚ್ಚೆ ಹೊಯ್ಯುತಿವೆ ಮೋಡಗಳು !
ಸಮಯ ಜಾಗದ ಪರಿವೆಯಿಲ್ಲದೆ |
ಮೋಡಗಳೂ ನಮ್ಮ ಜನರಿದ್ದಂತೆ,
ಬೇಡದ ಜಾಗದಲಿ - ಸರಿಯಲ್ಲದ ಸಮಯದಲಿ ಹುಯ್ಯುವುದೇ !
ಹೊಸ್ತಿಲ ಹೊರಗೆ ನಿಂತು ನೋಡುವುದೇ ಚೆಂದ, ಒಳಗೆ ಬರಲೆಕೋ ಹಿಂಜರಿಕೆ
ನೀನೇ ಬಂದು ಬಿಡು ಓ ಗೆಳತಿ, ನನ್ನದು ತೆರೆದ ಬಾಗಿಲ ಮನೆ
ಮೊಡಗಳಿಗೇನೋ ಜಡತ್ವ,
ನಿಂತಲ್ಲೇ ನಿಂತಿವೆ ಗರ ಬಡಿದಂತೆ

ಗಾಳಿಗೂ ಉಸಿರಾಟದ ತೊಂದರೆ,
ವರುಣನಿಗೆ ವನವಾಸ,
ಕೇಳುವವರಾರಿಲ್ಲ ಬಾಯ್ಬಿರಿದು ನಿಂತ ಭೂಮಿಯ ಚಿಂತೆ
ಸನ್ಯಾಸಿಯಾಗಬೇಕಿದೆ ನನಗೆ,
ವೈರಾಗ್ಯವ ತೊರೆದು ಸನ್ಯಾಸಿಯಾಗಬೇಕಿದೆ !

ಸನ್ಯಾಸಿಯಾಗಬೇಕಿದೆ ನನಗೆ,
ಏಕಾಂತಕೆ ಅಂತ್ಯ ಹಾಡಿ ಸನ್ಯಾಸಿಯಾಗಬೇಕಿದೆ !

ಬದುಕಿನ ಶೂನ್ಯತೆಯಲಿ ಅನಂತತೆಯ ಹುಡುಕಿ,
ಮೋಕ್ಷದ ಮೇಲಿನ ಮೋಹವ ಹೊಸಕಿ,
ಸನ್ಯಾಸಿಯಾಗಬೇಕಿದೆ ನನಗೆ !
ಪ್ರಿಯಕರನ ತುಂಟಾಟಕೆ ನಾಚಿ ನೀರಾದ ನೀರೆಯರೆಷ್ಟೋ,
ಮುಸ್ಸಂಜೆ ಸಮಯದಲಿ ಆಕಾಶ ಕೆಂಪೇರಿದೆ !

ಗಾಳಿಯ ದಾಳಿಗೆ ಮೊಡಗಳೆಲ್ಲ ಗುಳೆ ಹೊರಡಿವೆ,
ದುಃಖ ದುಮ್ಮಾನಗಳ ಭಾರಕೆ, ಕಣ್ಣೀರ ಮಳೆ ಸುರಿದಿದೆ
ಹಳೆ ವರ್ಷದ ಬೇರು ಭದ್ರವಾಗಿರಲಿ-ಹೊಸ ವರ್ಷದ ಚಿಗುರು ಕುಡಿಯೊಡೆಯಲಿ,
ದುಃಖ-ದುಮ್ಮಾನಗಳೆಲ್ಲ ತರಗೆಲೆಗಳಂತೆ ಉದುರಲಿ-
ಸಂತಸದ ಹೂವರಳಿ ನಗಲಿ |
ಶ್ರಮ-ಪರಿಶ್ರಮದ ಕಾಯಿಯದು ಯಶಸ್ಸಿನ ಹಣ್ಣಾಗಲಿ-
ನವಿರಾದ ತಂಗಾಳಿ ನೆಮ್ಮದಿಯ ಉಸಿರಾಗಲಿ |

ಹೊಸ ವರ್ಷ ಎಲ್ಲರಿಗು ಹಳೆತನ್ನು ಮರೆಸದಿರಲಿ-
ನವ ಚೈತನ್ಯವ ಹೊತ್ತು ತರಲಿ
ಮಳೆ ಹುಯ್ಯುವ ಈ ಸಮಯದಲಿ,
ಒಂಟಿತನದಿ ಮನ ಒಣಗಿ ನಿಂತಿದೆ

ಬೊಗಸೆ ಹಿಡಿದ ಸೋನೆ ಮುತ್ತೆಲ್ಲ ಬೆರಳ ಸಂದಿಯಲಿ ಸೋರಿ ಹರಿದಿದೆ

ಕಣ್ಣ ಮಿಂಚು ಕಾಣದಾಗಿ, ಬರೀ ಗುಡುಗು ಸಿಡಿಲಿನ ಕಿರುಚಾಟ,
ರಾತ್ರಿಯೆಲ್ಲ ರಪ ರಪ ರಾಚುವ ವರುಣನಾರ್ಭಟ ,
ಬಾರದ ನಿದ್ರೆಗೆ ಬದುಕೆಲ್ಲ ಹುಡುಕಾಟ