Friday, December 4, 2020

 ಹೊಸ ಗೆಳೆತನದ ಸಡಗರ - ತುಂಬಾ ಮಾತಾಡಬೇಕು ಎಡೆಬಿಡದೆ

ಕೇಳಬೇಕು, ತಿಳಿಯಬೇಕು - ನಿನ್ನ ಇಷ್ಟ ಕಷ್ಟಗಳನ, ಆಗು ಹೋಗುಗಳನ 

ಚಿಂತೆಯೆನಗೆ, ನನ್ನೀ ಉತ್ಸಾಹ ನಿನ್ನ ಉಸಿರುಗಟ್ಟುವುದೇ? ನಿನಗೂ ಅದೇ ಹಿಂಜರಿಕೆಯೇ ?

ಆಡಿ ಆಡಿ ಮಾತೆಲ್ಲ ಖಾಲಿಯದರೇನು ಗತಿ ? ಗಕ್ಕನೆ ಬಂದು ನಿಲ್ಲುವ ಮೌನಕ್ಕೆ ಅಂಜದಿರುವಷ್ಟು ಆಪ್ತತೆ ಬೆಳೆದಿಲ್ಲ ಹುಡುಗಿ


 ನಾನು ನಾವುಗಳ ಸೈದ್ಧಾಂತಿಕ ಸಮರದ ನಡುವೆ ನೆಮ್ಮದಿಯಿಲ್ಲದೆ ನಲುಗಿದೆ ಮನಸು,

ಆತ್ಮಸಾಕ್ಷಿ ಇಂದು ಮೂಕ ಪ್ರೇಕ್ಷಕ |

ಜೀವಿಸುವುದೇ ಜೀವನ ಎಂದುಕೊಂಡವನಿಗೆ

ಅರಿವಾಗುತಿದೆ,

ನಾನು ನನಗಾಗಿ ಜೀವಿಸುತ್ತೇನೆ, ನಾವುಗಳಿಗಾಗಿ ಜೀವನ ನಡೆಸುತ್ತೇನೆ

ಬಹುಶಃ ಎಲ್ಲರ ಬದುಕೂ ಇಷ್ಟೇ


 ಹಿಂತುರಿಗಿ ಹೋಗದಷ್ಟು ದೂರ, ಹಿಂತುರಗದೇ ಮುನ್ನಡೆಯದಷ್ಟು ಹತ್ತಿರ

ನಡೆದು ಬಂದ ದಾರಿಯ ಉದ್ದಳತೆಯ ಅಂದಾಜಿಲ್ಲ,

ನಮ್ಮವರ ನಡುವಿನ ಅಂತರ ಮಾತ್ರ ಅಳತೆಗೂ ನಿಲುಕದಾಗಿದೆ

ನಾ ದೂರ ಬಂದೇನೋ , ನಮ್ಮವರು ಅಲ್ಲಿಯೇ ಉಳಿದುಹೋದರೊ?

ನಾ ಬಂದಿದ್ದಾದರೆ, ಬೇಡವೆನ್ನಲಿಲ್ಲೆಕವರು?

ಅವರಲ್ಲಿಯೇ ಉಳಿದರೆ, ನಾನೇಕೆ ಕರೆತರಲಿಲ್ಲ

 ಕಳೆದು ಹೋದ ಕವನಗಳ ಹುಡುಕಿ ತರುವ ಯತ್ನದಲ್ಲಿ,

ಮರೆತು ಹೋದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ,

ಮಂಪರಿನಿಂದ ಮುದುಡಿ ಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||


ಎಂದೋ ಅರ್ಥೈಸಿದ ಮೊದಲ ಚರಣವೇ ತಿಳಿಯುತ್ತಿಲ್ಲ !

ಇನ್ನು ಕೊನೆಯ ಸಾಲುಗಳ ಮಾತೆಲ್ಲಿ ?


ಬರೆಯುವುದ ಬಿಟ್ಟರೆ ಶಬ್ದಗಳೂ ಬದುಕವು ತಲೆಯೊಳಗೆ,

ಈಗ ಬರೆಯಬೇಕೆಂದರೂ ಬಾರವು ಲೇಖನಿಯ ತುದಿಗೆ |


ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||


ನಾನೇ ಗೀಚಿದ ಸಾಲುಗಳು, ಕೇಳಿದಂತಿವೆ;

ನನಗೂ-ನಿನಗೂ ಎಲ್ಲಿಯ ಸಂಬಂಧ!?


ಕದನವೊಂದು ಒಡಮಾಡಿದೆ ಮನದ ಮೂಲೆಯಲಿ,

ಸಂಧಾನವಾಗದಿರೆ ಯುದ್ಧವಾದೀತು !


ಯಾವುದು ಮುಖ್ಯ ಕವಿತೆಗೆ; ಶಬ್ದವೋ? ಸಾರಾಂಶವೋ?


ದನಿಯೊಂದು ಉಸುರಿತು, ಮನದ ಮೂಲೆಯಲಿ;

ಶಬ್ದ ಬರಿ ಸಂವಹನ ಮಾಧ್ಯಮ,

ಬಾಹ್ಯ ಸೌಂದರ್ಯಕ್ಕೆ ಮರುಳಾಗಾದಿರು ಮೂಢ!

ಕಣ್ಣಿನಲಿ ಹೇಳುವ ಕವಿತೆಗೆ ಅಕ್ಷರ ಮಾಲೆ ಬೇಕೇನು?


ಇನ್ನಾವುದೋ ಅರಚುತಿಹುದು !

ಶಬ್ದಗಳೇ ಅಲ್ಲವೇ ಕಾವ್ಯಕ್ಕೆ ಶೃಂಗಾರ,

ಶೃಂಗಾರವಿರದ ಸಪ್ಪೆಯ ಮೂಸುವುದು ಯಾರಾ?


ಆದರೆನ್ನ ಬುದ್ಧಿಗೆ ಜಾಣ ಕಿವುಡು ! ||


ಕಾವ್ಯ ಸೃಷ್ಠಿಯ ಕದನದಲಿ ಪದಗಳಿಗೆ ದನಿಯಿಲ್ಲ,

ಎಷ್ಟು ಹೆಕ್ಕಿ-ಹುಡುಕಿದರೂ ಶಬ್ದಗಳೇ ಸಿಗುತ್ತಿಲ್ಲ |


ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ !


ಹೊಸದಾಗಿ ಹೊಸೆಯಬೇಕಿದೆ ಅವೇ ಹಳೆಯ ಶಬ್ದಗಳ|

ಮೂಡಿಬರಬೇಕಾಗಿದೆ ಮುಂಜಾನೆ ಕವಿತೆ; ಗೋಧೂಳಿ ಕವನ,

ಏನಾದರಾಗಲಿ ಶುರು ಮಾಡಬೇಕಿದೆಯಣ್ಣ;

ಅರ್ಧ ಬರೆದ ಕವಿತೆ ||


 ಸುರಿವ ಸೋನೆ ಮಳೆಯಂತೆ ಜೀವನ, ಕೊನೆಗೊಮ್ಮೆ ನೆಲಕ್ಕಪ್ಪಳಿಸಿ ಮಣ್ಣಾಗಲೇ ಬೇಕು

ತರು ಲತೆ ಬಳ್ಳಿಗೆ ಮುತ್ತಿನ ಮಾಲೆಯ ಪೋಣಿಸಿ, 

ಮೆಲ್ಲನೆ ಬೀಸುವ ತಂಪು ಗಾಳಿಯಲಿ, ಜೀಕುತ್ತಿರು ಜೋಕಾಲಿ

 ಪ್ರೇಮದಮಲಿನಲಿ ತೊಯ್ದ ಮೊಲೆಯ ತೊಟ್ಟುಗಳ ಕಚ್ಚಿದಾಗ, ಹುಸಿಮುನಿಸಿನಿಂದ ಮುಲುಗುತ್ತಿಯಲ್ಲ ಏಯ್ ಎಂದು - ಪ್ರೀತಿ ಇನ್ನೂ ಉತ್ಕಟವಾಗುತ್ತೆ ಹುಡುಗಿ. 

 ನೀ ಬರೆವ ಪ್ರತಿ ಸಾಲಿನಲೂ ಸರಸದ ಸೊಗಡಿದೆ ಹುಡುಗಿ