Monday, December 19, 2016

ಹುಡುಕಾಟ

ಮಲೆಗಳಲಿ ಮದುಮಗಳ ಅರಸಿ ಬಂದವ ನಾನು, ಮನ ಗೆದ್ದವಳು ಮಾತ್ರ ಕಾನೂರು ಹೆಗ್ಗಡತಿ |
ಸಂಗ್ಯ-ಬಾಳ್ಯರ ಹುಚ್ಚೆದ್ದು ಹುಡುಕುವಾಗ, ಗಕ್ಕನೆ ಕಂಡದ್ದು ಸಿಂಗಾರವ್ವನ ಅರಮನೆಯ ಒಡತಿ|
ಘಟಶ್ರಾಧ್ಧದಲಿ ಕಂಡ ನಾಟಕೀಯತೆ ಅರ್ಥವಾದದ್ದು ಸಂಸ್ಕಾರ ಕೆದಡಿದಾಗ|
ಪ್ಯಾಪಿಲಾನ್  ಮಹಾ ಪಲಾಯನಗೈಯ್ಯಲು; ಕಿರಗೂರಿನ ಗಯ್ಯಾಳಿಗಳು ಕಾರ್ವಲೋಗೆ ಬಡಿದರು, ಜುಗಾರಿ ಕ್ರಾಸಿನಲಿ!
ಈ ಚಿದಂಬರ ರಹಸ್ಯ ಅರಿಯೆನು ನಾನೀಗ|
ಕವಲು ದಾರಿಗಳಲಿ ಕಂಗೆಟ್ಟ ಮನಸಿಗೆ ಕೊನೆಗೂ ಪರ್ವ,
ಮೂಕಜ್ಜಿಯ ಕನಸುಗಳ ಕಂಡ ಕಣ್ಣಿಗೆ ಅದೆಂತದೋ ಗರ್ವ |

??

ಮುಂಜಾವಿನ ಮಂಜಿನಲಿ ಮೂಕಜ್ಜಿಯ ಕನಸುಗಳ ಹುಡುಕಿ ಹೊರಟವ ನಾನು |
ಜಟಿಲ ಜೀವನದ ಸರಳಾನುವಾದಕೆ ಬೆರಗಾದೆ!
ಬೆಟ್ಟದ ಜೀವಗಳ ರೋದನೆಗೆ ಚೋಮನ ದುಡಿಯ ದನಿಗೂಡಲು,
ಚಿಗುರಿದ ಕನಸಿನ ಮೇಲೆಯೇ ಅನುಮಾನ|
ಮಣ್ಣಿಗೆ ಮರಳುವುದೇ ಅಂತಿಮ ಸತ್ಯವೆನೆ, ಕನಸು ಕನಸಿನ ನಡುವೇಕೆ ತಾರತಮ್ಯ?
ಕನಸು ಕಾಣುವ ಕಣ್ಣುಗಳು ಬೇರೆ, ಆದರೇನು? ಕನಸಿನ ಚಿತ್ರಪಟ ಬಿಡಿಸುವವ ಒಬ್ಬನೇ ಅಲ್ಲವೇ?