Sunday, November 7, 2010

ಹುಡುಕಾಟ

ಮೌನದರಮನೆಯಲಿ ಮನಸಿನ ಮಾತಿಗೆ

ಶಬ್ದಗಳಲಿ ಉತ್ತರ ಹುಡುಕಿದಂತೆ

ಜೀವನದ ಜಾತ್ರೆಯಲಿ, ಭಯವೇ ಬೆಚ್ಚಿಬೀಳುವಂಥ ಬೂಟಾಟಿಕೆ-

ಆಡಂಬರದ ಕಿರುಚಾಟ,

ಒಳಗೊಳಗೆ ಮೂಕ ಮನಗಳ ಮೌನ ಮಾತಿನ ಹುಡುಕಾಟ |

ಕಣ್ಣೀರ ಕಣ್ಗಳಲಿ ಸಂತೋಷದ ತೊಳಲಾಟ

ಮನದ ಮೂಲೆಯಲಿ ಕಂಬನಿಯ ನೀರಾಟ |

ಬೆಳಕಿನ ಬುಗ್ಗೆಯಲಿ ಹೊಳಪಿನ ಅಲೆದಾಟ

ಬರೀ ಹುಲಿಗಳ ನಾಡಿನಲಿ ಹೊಟ್ಟೆಗಾಗಿ ಹೋರಾಟ |

ಅಕ್ಷರಗಳ ಜೋಡಣೆಯಲಿ ಅರ್ಥಗಳ ಅನ್ವೇಷಣೆ

ಸತ್ವವಿರದ ಶಬ್ದಗಳ ಸುಂದರ ಸಂಭಾಷಣೆ |

ಯಾರು ಯಾರಿಗೆ ಮಿತ್ರರಿಲ್ಲಿ, ಯಾರು ಶತ್ರುಗಳೋ?

ಜಡ-ಜೀವಗಳ ಕಾದಾಟದ ನಡುವೆ ಗೆಲುವುದಾರ ಬಲಗಳೋ?

ಜೀವಂತ ಕಣ್ಣುಗಳೂ ಸಹ ಮೋಸದ ಕವಡೆಗಳು

ಪ್ರತೀ ಹುಡುಕಾಟದಲ್ಲೂ ಹೊಸತರದ ಭಾವಗಳು ;

ಜಡವಂತೂ ಮೊದಲೇ ನಿರ್ಜೀವ !

ಹುಡುಕಾಟದ ಈ ಹಾದಿಗೆ ಯಾವತ್ತು ಕೊನೆ,

ಎಲ್ಲಿರುವುದು ಉತ್ತರಗಳ ಮಹಾಮನೆ?

ನೂರಾರು ಉತ್ತರಗಳು ; ಯಾವುದೆಂದು ಆರಿಸುವುದು ?

ಸಾವಿರಾರು ಪ್ರಶ್ನೆಗಳು ; ಸತ್ತಷ್ಟೂ ಹುಟ್ಟುವುದು !

ಹುಡುಕಿದಷ್ಟೂ-ದೊರಕಿದಷ್ಟೂ ಹೆಚ್ಚಾಗುವುದು ರಹಸ್ಯ

ಅದುವೇ ಜೀವನದ ಬಲು ದೊಡ್ಡ ಹಾಸ್ಯ

Wednesday, November 3, 2010

ಹೊಯ್ದಾಟ

ಕೆಲವರು ಹೇಳ್ತಾರೆ-

ಕೆಲಸ ಮಾಡು ಪ್ರತಿಫಲ ಬಯಸಬೇಡ

ಅದೇ ಕೆಲವರು ಬೇಡುತ್ತಾರೆ-

ಕಾರ್ಯಸಾಧನೆಗೆ ತುಂಬಿರಬೇಕು ಪ್ರೋತ್ಸಾಹದ ಕೊಡ

ಎಂಥ ಆಶ್ಚರ್ಯ, ಅಣುಕು!

ನಾವೆಲ್ಲ ಬಯಸುವ ಪ್ರತಿಫಲ ಪ್ರೋತ್ಸಾಹವೇ ಅಲ್ಲವೇ?!

ಪ್ರತಿಫಲಕ್ಕೆ ಏನೂ ಬೆಲೆಯೇ ಇಲ್ಲವೇ?

ಅಷ್ಟಕ್ಕೂ ಪ್ರೋತ್ಸಾಹ ಎಂದರೇನು?

ಪ್ರಯತ್ನಕ್ಕೆ ಸಿಕ್ಕ ಗೆಲುವೇ? ಅಥವಾ

ಮನಸ್ಸಿಗೆ ಸಿಗುವ ಸಮಾಧಾನವೇ?

ನಾಲ್ಕಾರು ಮಂದಿ ಹೊಗಳಿ ಹೊನ್ನ ಶೂಲಕ್ಕೇರಿಸಿದರೆ

ಅದು ಪ್ರೋತ್ಸಾಹವಾದೀತೆ? ಮರುಕದಂತೆ ಕಾಣದೇ ಅದು?!

ಪ್ರಯತ್ನದ ಬಳಲಿಕೆ ತಣಿಯಲು ದೊರಕುವ

ಜೀವನಾಧಾರವೇ ನಿಜವಾದ ಪ್ರೋತ್ಸಾಹವಲ್ಲವೇ?

ಜೀವನಾಧಾರ ಕೊಡದ ಪ್ರಯತ್ನ ವ್ಯರ್ಥವಲ್ಲವೇ?

ಅಥವಾ ಆ ಪ್ರಯತ್ನದ ದಿಕ್ಕು ಸರಿಯಿಲ್ಲವೇ?

ಅಷ್ಟಕ್ಕೂ ದಿಕ್ಕು ನಿಶ್ಚಿತವೇ? ; ಇಲ್ಲಾ ನಮ್ಮ ಕಲ್ಪನೆಯೇ?

ಮೊದಮೊದಲು ಬಯಸದ ಪ್ರತಿಫಲ ಈಗ

ಬೇಡಿದ್ದೇ ತಪ್ಪೇ? ; ತುಂಬಾ ತಡವಾಯಿತೇ?

ಗೊತ್ತಿಲ್ಲಾ!!

ಮನಸ್ಸು ಈ ಎರಡು ದಿಕ್ಕುಗಳ ನಡುವೆ ಅಲೆಮಾರಿ

ಯಾಕೋ ಸಿಗುತ್ತಿಲ್ಲ ಸರಳ ದಾರಿ.

ಎರಡು ದೋಣಿಯ ಪಯಣ, ಸುಖವಲ್ಲ

ನನಗೂ ಗೊತ್ತು!

ಆದರೂ, ನನ್ನ ಮನಸ್ಸು- ನನ್ನದಲ್ಲದ ಸ್ವತ್ತು!!?

ಮನಸ್ಸು-ಮೆದುಳು

ಯಾವಾಗಲೂ ಹೀಗೆ ವೈರಿಗಳೇ?

ವೈರಿಗಳಲ್ಲೂ ವಿರೋಧವೆನ್ನುವುದು ಸಮಾನ ಅಂಶವಲ್ಲವೇ?

ದಿಕ್ಕುಗಳು ನಿಶ್ಚಿತವಾದರೆ ಸಮಾನ ಅಂಶ ಅಸಮವೇ?!

ಅಥವಾ ದಿಕ್ಕುಗಳು ಸಂಧಿಸುವವೇ ಮುಂದೊಂದು ದಿನ?

ಗೊತ್ತಿಲ್ಲಾ!!

ಕಾಲದ ಹರಿವಲ್ಲಿ ಉತ್ತರ ಸಿಗುವುದೋ !

ಅದೂ ತಿಳಿದಿಲ್ಲಾ.

ತಿಳಿದಿರುವುದೊಂದೆ-

ದಿಕ್ಕು ನಿಶ್ಚಿತವೆಂದು ಒಪ್ಪುವ ದೃಢ ಸಂಕಲ್ಪ

ನಿನ್ನಲ್ಲಿದ್ದರೆ, ಆರಿಸಿಕೊ ಎರಡರಲ್ಲೊಂದನ್ನು

ಇಲ್ಲವೋ; ಮನಸ್ಸು ಮರುಳು ಎನ್ನುತ್ತಾರೆ

ಪುಸಲಾಯಿಸು !- ದಿಕ್ಕುಗಳು ಸೇರುತ್ತವೆಂದು

ಅದರ ಹೊಯ್ದಾಟದ ಅಲೆಗಳಲ್ಲಿ

ಪ್ರಯತ್ನದ ಪಯಣ ಸಾಗುತ್ತಿರಲಿ

ಅಷ್ಟಕ್ಕೂ ಪ್ರಯತ್ನ ಎಂದರೇನು ?!?!?!?!?!?

Friday, October 1, 2010

ಬೇಕು ಎಂದಾಗ ಸಿಗದೇ , ಬೇಡ ಎಂದಾಗ ಬೆನ್ನು ಬೀಳುವುದೇ ಜೀವನ;
ಕಂಡದ್ದೆಲ್ಲಾ ಬೇಕು ಎನ್ನುವವನು ದುಃಖಿ,
ಸಿಕ್ಕಿದ್ದೆಲ್ಲಾ ಬಾಚಿಕೊಳ್ಳುವವನು ಆಸೆಬುರುಕ,
ಬಾಗಿಲಿಗೆ ಬಂದಿರುವುದ ಬೇಡ ಎನ್ನುವವನು ಮೂರ್ಖ
ಈ ಮೂವರಲ್ಲಿ ಯಾರಿಗೆ ಸುಖ?
ದನಿಯಿಲ್ಲದ ದೃಷ್ಟಿಯಿಂದ, ಗೊತ್ತಿಲ್ಲದ ಹೆಸರನ್ನು ಅರಿವಿಲ್ಲದೆ ಕರೆದಾಗ ಜಗದ ಪರಿವೆಲ್ಲ ಜಾರಿಹೋಗಿತ್ತು

Friday, September 3, 2010

ಕ್ಷಮಿಸಿ

ನನ್ನ ನೆಚ್ಚಿನ ಮಾಲಿಕೆಯಾದ "ಕನ್ನಡ ಸಾಹಿತ್ಯ ಸಮ್ಮೇಳನ- ಒಂದು ಹಿನ್ನೋಟ" ವನ್ನು ಕಾರಣಾಂತರಗಳಿಂದ ಆರಂಭದಲ್ಲಿಯೇ ಮುಕ್ತಾಯಗೊಳಿಸುತ್ತಿದ್ದೇನೆ. ಆದರೆ ನಾನು ಸಂಗ್ರಹಿಸಿದ ಮಾಹಿತಿಗಿಂತ ಅಗಾಧವಾದ ಮಾಹಿತಿ ಭಂಡಾರವನ್ನು "http://www.kannadakavi.com/kavikoota/index.php" ಇಲ್ಲಿ ಕಾಣಬಹುದು.


Friday, May 21, 2010

page #2

ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅಲ್ಪ ಅಂಶಗಳು:

) ಅಧ್ಯಕ್ಷರ ಆಯ್ಕೆ:

ಸಮ್ಮೇಳನದ ಕಾರ್ಯಭಾರದ ಮುಖ್ಂಡತ್ವವನ್ನು ಸಮ್ಮೇಳನಾಧ್ಯಕ್ಷರ ಕೈಗೆ ಕೊಡಲಾಗಿರುತ್ತದೆ. ಸಮ್ಮೇಳನದ ಅಧ್ಯಕ್ಷರಾಗುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸಮ್ಮೇಳನಾಧ್ಯಕ್ಷರನ್ನು ಅವರ ಸಾಹಿತ್ಯ ಸಂಶೋಧನೆ, ಕನ್ನಡ ಸೇವೆ,ಶಿಕ್ಷಣ ಸಾಧನೆ, ಜೀವನ ಶೈಲಿಯ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ. ಅವರ ಜೀವನ ಸಾಧನೆಗಳು ಅವರನ್ನು ಸ್ಥಾನಕ್ಕೆ ಕರೆದೊಯ್ಯುತ್ತವೆ. ಇದಕ್ಕೆ ಲಿಂಗ ಭೇಧ,ಜಾತಿ ಭೇಧ,ಐಶ್ವರ್ಯ ಭೇಧವಿಲ್ಲ.

)ಸಮ್ಮೇಳನದ ರೂಪು-ರೇಷೆ:

ನಾಡಿನ ಸಂಪ್ರದಾಯದಂತೆ ಧ್ವಜಾರೋಹಣದೊಂದಿಗೆ ಸಮ್ಮೇಳನದ ಹಸಿರು ನಿಶಾನೆ ಹೊರದೊರುತ್ತದೆ. ಸಂಪ್ರದಾಯಿಕ ಸಾಮಾನ್ಯ ಕಾರ್ಯಕ್ರಮಗಳು ಮುಗಿದ ನಂತರ ಸ್ಮರಣ ಸಂಚಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ- ಗ್ರಂಥ ಬಿಡುಗಡೆಗಳು ಜರುಗುತ್ತವೆ. ನಂತರದ ಮೂರ್-ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಹತ್ತು ಹಲವು ಗೋಷ್ಟಿಗಳು, ವಿಚಾರ-ವಿನಿಮಯಗಳು ನಡೆಯುತ್ತವೆ. ಕೊನೆಗೆ ಸಾಂಪ್ರದಾಯಿಕ ಸಮಾರೋಪ ಸಮಾರಂಭ ನೆರವೇರುತ್ತದೆ.

)ಕನಿಷ್ಠ ಕಾರ್ಯಶೈಲಿ ಹಾಗು ಸಮ್ಮೇಳನದ ಪ್ರಭಾವ:

ಇಲ್ಲಿ ಹಲವು ಗೋಷ್ಠಿಗಳ ಮೂಲಕ ಕನ್ನಡದ ಸಾಹಿತಿಗಳು, ಸಾಹಿತ್ಯ ಕಾರ್ಯಗಳು, ಕನ್ನಡದ ಸದ್ಯದ ಸ್ಥಿತಿ-ಗತಿ, ಸವಾಲುಗಳ ದೀರ್ಘ ಚರ್ಚೆಯಾಗುತ್ತದೆ. ಅನೇಕ ಸಾಹಿತಿಗಳು,ಚಿಂತಕರು ತಮ್ಮ-ತಮ್ಮ ವಿಚಾರಧಾರೆಯನ್ನು ವಾಚನಗಳ ಮೂಲಕ, ವಾದಗಳ ಮೂಲಕ ಮಂಡಿಸುತ್ತಾರೆ. ಕವಿ-ಲೇಖಕರು ತಮ್ಮ ಕವಿತೆಗಳನ್ನು ವಾಚಿಸುತ್ತಾರೆ. ಸಾಹಿತ್ಯದ ಸರ್ವರಂಗಗಳ ಪರಿಚಯ ಇಲ್ಲಿ ಕಾಣಸಿಗುತ್ತದೆ. ಕನ್ನಡ ನಾಡಿನ ಪಾರಂಪರಿಕ ನೃತ್ಯ, ಸಂಗೀತ, ಕುಂಚ ಮೊದಲಾದವುಗಳು ಸರಾಗವಾಗಿ ಸಾಗುತ್ತವೆ. ಸಮ್ಮೇಳನ ನಡೆದ ಸ್ಥಳ ಹಾಗೂ ಅದರ ಗತ ವೈಭವದ ಸಂಪೂರ್ಣ ಪರಿಚಯವಾಗುತ್ತದೆ. ಇತ್ತೀಚಿನ ಸಮ್ಮೇಳನಗಳಲ್ಲಿ ಕನ್ನಡದ ತಂತ್ರ ಕ್ಷೇತ್ರ ಪ್ರವೇಶ ಹಾಗೂ ಅಳವಡಿಕೆಯ ಬಗೆಗೆ, ಕನ್ನಡದ ಏಕೀಕರಣದ ಬಗೆಗೆ ವಾದ-ವಿವಾದಗಳು ಹೊರಬೀಳುತ್ತವೆ.

ಇದರಿಂದ ಕನ್ನಡಿಗರಲ್ಲಿ ಕನ್ನಡದ ಅರಿವು ಮೂಡುತ್ತದೆ. ಕನ್ನಡದ ಹಲವು ವೈಶಿಷ್ಟ್ಯಗಳ ಗೋಚರವಾಗುತ್ತದೆ. ಕನ್ನಡಿಗರಲ್ಲಿ ಕನ್ನಡದ ಮನೋಭಾವನೆ ಬೆಳೆಯುತ್ತದೆ. ಕನ್ನಡ ಸಾಹಿತ್ಯವನ್ನು ದೇಶಕ್ಕೆ, ಯುವ ಪೀಳಿಗೆಗೆ ಪರಿಚಯಿಸುವ ಒಂದು ಉತ್ತಮ ವೇದಿಕೆ ಇದಾಗಿದೆ.

ರೀತಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಏಳು-ಬೀಳಿನ ನಡುವೆ ಮುನ್ನಡೆಯುತ್ತಿವೆ. ಇದೇ ರೀತಿ ಸಮ್ಮೇಳನಗಳು ಜರುಗಲಿ, ಕನ್ನಡದ ಅಭಿವೃದ್ಧಿಯಾಗಿ ಕನ್ನಡ ಬೆಳೆಯಲಿ ಎಂದು ಆಶಿಸುತ್ತ(ವಿಶ್ವಾಸವಿಡುತ್ತ), ಕನ್ನಡದ ಕಾರ್ಯಕ್ಕೆ ಸದಾ ಕಂಕಣ ಬದ್ಧರಾಗಿರುತ್ತೇವೆಂದು ಕಿರುನುಡಿಯ ಕಾರುತ್ತ ಪೂರಕ ಬರಹಕ್ಕೆ ಅಂತಿಮ ಪರದೆಯನ್ನು ಹೆಣೆಯುತ್ತೇನೆ.

ಕನ್ನಡವನುಳಿದೆನಗೆ ಅನ್ಯಜೀವನವಿಲ್ಲ

ಕನ್ನಡವೇ ಎನ್ನುಸಿರು ಪೆತ್ತೆನ್ನ ತಾಯಿ

ಕನ್ನಡವೇ ಧನ-ಧಾನ್ಯ, ಕನ್ನಡವೇ ಮನೆ-ಮಾನ್ಯ

ಕನ್ನಡವೇ ಎನಗಾಯ್ತು ಕಣ್ಣು-ಕಿವಿ-ಬಾಯಿ ||

Wednesday, May 19, 2010

page #1

ಮುನ್ನುಡಿ –ಜ್ಞಾನಕ್ಕೆ ಹಿಡಿದ ಕನ್ನಡಿ:

ಹೆಸರು ಸೂಚಿಸುವಂತೆ ಇದೊಂದು ಕನ್ನಡ ಸಾಹಿತ್ಯ ಕೃಷಿಯ ಸುವ್ಯವಸ್ತಿತವಾದ ಸಮ್ಮೇಳನವಾಗಿದೆ. ’ಕನ್ನಡಿಗರ ಹಬ್ಬ’ ವೆಂದೆ ಪ್ರಸಿದ್ಧಿಯಾದ ಕನ್ನಡ ಸಾಹಿತ್ಯ ಸಮ್ಮೇಳನ ನಿಜಕ್ಕೂ ಕಾವ್ಯ-ಕೃತಿಗಳ ಜಾತ್ರೆಯೇ ಸರಿ. ಕನ್ನಡದ ಸರ್ವರಂಗಗಳ ಸುಗಮವಾದ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನೇರ ನಿಟ್ಟಿನಿಂದ ಸಹಕಾರಿಯಾಗಿದೆ. ಸಮ್ಮೇಳನದಲ್ಲಿ ಕೇವಲ ಸಾಹಿತ್ಯವಷ್ಟೇ ಅಲ್ಲದೆ ಕನ್ನಡ ನಾಡಿನ ಹಲವು ಸಂಸ್ಕೃತಿಗಳ ಮೇಳವೇ ಜರುಗುತ್ತದೆ.

ಸಮ್ಮೇಳನಗಳು ’ಕನ್ನಡ ಸಾಹಿತ್ಯ ಪರಿಷತ್’ನ ನೇತೃತ್ವದಲ್ಲಿ ಸೂಚಿಸಿದ ಅಧ್ಯಕ್ಷರುಗಳ ಮಾರ್ಗದರ್ಶನದಲ್ಲಿ ನೆರವೇರುತ್ತದೆ. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾದುದು ೧೯೧೫ ಮೇ ೩ರಂದು, ಬೆಂಗಳೂರಿನಲ್ಲಿ. ಪ್ರಥಮ ಸಮ್ಮೇಳನಾಧ್ಯಕ್ಷರು ಎಚ್.ವಿ.ನಂಜುಂಡಯ್ಯ, ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರಲ್ಲಿ ಒಬ್ಬರು. ರೀತಿ ಆರಂಭಗೊಂಡು, ಕನ್ನಡದ ಸರ್ವರಂಗ ಬೆಳವಣಿಗೆಗೆ ಸಹಾಯ ಹಸ್ತ ತೋರುತ್ತ ಯಶಸ್ವಿಯಾಗಿ ನಡೆದುಕೊಂಡು ಬಂದಿವೆ.

ಮೊದ-ಮೊದಲಿಗೆ ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿದ್ದ ಚರ್ಚೆಗಳು, ಇಂದು ತಂತ್ರಜ್ಞಾನದ ಬಗೆಗೂ ಚಿತ್ತ ಬೀರಿವೆ. ಆದರೆ ಅಂದಿನ ವೈಭವ, ಜನ-ಜಾತ್ರೆ ಇಂದು ಕಳೆಗುಂದುತ್ತಿದೆ. ಶತಪ್ರಯತ್ನದ ಮಧ್ಯವೂ ಯಾವುದಾದರೂ ಒಂದು ಕೊರತೆ ಕನ್ನಡಿಗರನ್ನು ಕೊರೆಯುತ್ತಲೇ ಇದೆ. ಇತ್ತೀಚೆಗೆ ಸಮ್ಮೇಳನಗಳೂ ಕೂಡ ರಾಜಕೀಯದ ಪಾಪ ಪಾಶಕ್ಕೆ ಸಿಲುಕಿ ಜನರ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ನಷ್ಟವನ್ನು ಭರಿಸಲು ಕನ್ನಡಿಗರೆಲ್ಲರೂ ಸ್ವ-ಕಾಳಜಿಯಿಂದ ಪ್ರಯತ್ನಿಸಬೇಕಾಗಿದೆ. ಕರ್ನಾಟಕದ ಕೇತನವನ್ನು ಎಲ್ಲೆಡೆ ಹಾರಿಸಿ, ಕನ್ನಡ ಡಿಂಡಿಮವ ಬಾರಿಸಬೇಕಿದೆ. ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಗಬೇಕಿದೆ. ಆದ್ದರಿಂದ ಕನ್ನಡದ ಸಮ್ಮಿಲನದ ಮೇಳಕ್ಕೆ ಪೂರಕವಾಗಿ, ಅದರ ಅಲ್ಪ ಅರಿವನ್ನು ಕೊಡುವ ಪ್ರಯತ್ನ ಇಲ್ಲಿದೆ.