Friday, December 4, 2020

 ಹೊಸ ಗೆಳೆತನದ ಸಡಗರ - ತುಂಬಾ ಮಾತಾಡಬೇಕು ಎಡೆಬಿಡದೆ

ಕೇಳಬೇಕು, ತಿಳಿಯಬೇಕು - ನಿನ್ನ ಇಷ್ಟ ಕಷ್ಟಗಳನ, ಆಗು ಹೋಗುಗಳನ 

ಚಿಂತೆಯೆನಗೆ, ನನ್ನೀ ಉತ್ಸಾಹ ನಿನ್ನ ಉಸಿರುಗಟ್ಟುವುದೇ? ನಿನಗೂ ಅದೇ ಹಿಂಜರಿಕೆಯೇ ?

ಆಡಿ ಆಡಿ ಮಾತೆಲ್ಲ ಖಾಲಿಯದರೇನು ಗತಿ ? ಗಕ್ಕನೆ ಬಂದು ನಿಲ್ಲುವ ಮೌನಕ್ಕೆ ಅಂಜದಿರುವಷ್ಟು ಆಪ್ತತೆ ಬೆಳೆದಿಲ್ಲ ಹುಡುಗಿ


 ನಾನು ನಾವುಗಳ ಸೈದ್ಧಾಂತಿಕ ಸಮರದ ನಡುವೆ ನೆಮ್ಮದಿಯಿಲ್ಲದೆ ನಲುಗಿದೆ ಮನಸು,

ಆತ್ಮಸಾಕ್ಷಿ ಇಂದು ಮೂಕ ಪ್ರೇಕ್ಷಕ |

ಜೀವಿಸುವುದೇ ಜೀವನ ಎಂದುಕೊಂಡವನಿಗೆ

ಅರಿವಾಗುತಿದೆ,

ನಾನು ನನಗಾಗಿ ಜೀವಿಸುತ್ತೇನೆ, ನಾವುಗಳಿಗಾಗಿ ಜೀವನ ನಡೆಸುತ್ತೇನೆ

ಬಹುಶಃ ಎಲ್ಲರ ಬದುಕೂ ಇಷ್ಟೇ


 ಹಿಂತುರಿಗಿ ಹೋಗದಷ್ಟು ದೂರ, ಹಿಂತುರಗದೇ ಮುನ್ನಡೆಯದಷ್ಟು ಹತ್ತಿರ

ನಡೆದು ಬಂದ ದಾರಿಯ ಉದ್ದಳತೆಯ ಅಂದಾಜಿಲ್ಲ,

ನಮ್ಮವರ ನಡುವಿನ ಅಂತರ ಮಾತ್ರ ಅಳತೆಗೂ ನಿಲುಕದಾಗಿದೆ

ನಾ ದೂರ ಬಂದೇನೋ , ನಮ್ಮವರು ಅಲ್ಲಿಯೇ ಉಳಿದುಹೋದರೊ?

ನಾ ಬಂದಿದ್ದಾದರೆ, ಬೇಡವೆನ್ನಲಿಲ್ಲೆಕವರು?

ಅವರಲ್ಲಿಯೇ ಉಳಿದರೆ, ನಾನೇಕೆ ಕರೆತರಲಿಲ್ಲ

 ಕಳೆದು ಹೋದ ಕವನಗಳ ಹುಡುಕಿ ತರುವ ಯತ್ನದಲ್ಲಿ,

ಮರೆತು ಹೋದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ,

ಮಂಪರಿನಿಂದ ಮುದುಡಿ ಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||


ಎಂದೋ ಅರ್ಥೈಸಿದ ಮೊದಲ ಚರಣವೇ ತಿಳಿಯುತ್ತಿಲ್ಲ !

ಇನ್ನು ಕೊನೆಯ ಸಾಲುಗಳ ಮಾತೆಲ್ಲಿ ?


ಬರೆಯುವುದ ಬಿಟ್ಟರೆ ಶಬ್ದಗಳೂ ಬದುಕವು ತಲೆಯೊಳಗೆ,

ಈಗ ಬರೆಯಬೇಕೆಂದರೂ ಬಾರವು ಲೇಖನಿಯ ತುದಿಗೆ |


ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||


ನಾನೇ ಗೀಚಿದ ಸಾಲುಗಳು, ಕೇಳಿದಂತಿವೆ;

ನನಗೂ-ನಿನಗೂ ಎಲ್ಲಿಯ ಸಂಬಂಧ!?


ಕದನವೊಂದು ಒಡಮಾಡಿದೆ ಮನದ ಮೂಲೆಯಲಿ,

ಸಂಧಾನವಾಗದಿರೆ ಯುದ್ಧವಾದೀತು !


ಯಾವುದು ಮುಖ್ಯ ಕವಿತೆಗೆ; ಶಬ್ದವೋ? ಸಾರಾಂಶವೋ?


ದನಿಯೊಂದು ಉಸುರಿತು, ಮನದ ಮೂಲೆಯಲಿ;

ಶಬ್ದ ಬರಿ ಸಂವಹನ ಮಾಧ್ಯಮ,

ಬಾಹ್ಯ ಸೌಂದರ್ಯಕ್ಕೆ ಮರುಳಾಗಾದಿರು ಮೂಢ!

ಕಣ್ಣಿನಲಿ ಹೇಳುವ ಕವಿತೆಗೆ ಅಕ್ಷರ ಮಾಲೆ ಬೇಕೇನು?


ಇನ್ನಾವುದೋ ಅರಚುತಿಹುದು !

ಶಬ್ದಗಳೇ ಅಲ್ಲವೇ ಕಾವ್ಯಕ್ಕೆ ಶೃಂಗಾರ,

ಶೃಂಗಾರವಿರದ ಸಪ್ಪೆಯ ಮೂಸುವುದು ಯಾರಾ?


ಆದರೆನ್ನ ಬುದ್ಧಿಗೆ ಜಾಣ ಕಿವುಡು ! ||


ಕಾವ್ಯ ಸೃಷ್ಠಿಯ ಕದನದಲಿ ಪದಗಳಿಗೆ ದನಿಯಿಲ್ಲ,

ಎಷ್ಟು ಹೆಕ್ಕಿ-ಹುಡುಕಿದರೂ ಶಬ್ದಗಳೇ ಸಿಗುತ್ತಿಲ್ಲ |


ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ !


ಹೊಸದಾಗಿ ಹೊಸೆಯಬೇಕಿದೆ ಅವೇ ಹಳೆಯ ಶಬ್ದಗಳ|

ಮೂಡಿಬರಬೇಕಾಗಿದೆ ಮುಂಜಾನೆ ಕವಿತೆ; ಗೋಧೂಳಿ ಕವನ,

ಏನಾದರಾಗಲಿ ಶುರು ಮಾಡಬೇಕಿದೆಯಣ್ಣ;

ಅರ್ಧ ಬರೆದ ಕವಿತೆ ||


 ಸುರಿವ ಸೋನೆ ಮಳೆಯಂತೆ ಜೀವನ, ಕೊನೆಗೊಮ್ಮೆ ನೆಲಕ್ಕಪ್ಪಳಿಸಿ ಮಣ್ಣಾಗಲೇ ಬೇಕು

ತರು ಲತೆ ಬಳ್ಳಿಗೆ ಮುತ್ತಿನ ಮಾಲೆಯ ಪೋಣಿಸಿ, 

ಮೆಲ್ಲನೆ ಬೀಸುವ ತಂಪು ಗಾಳಿಯಲಿ, ಜೀಕುತ್ತಿರು ಜೋಕಾಲಿ

 ಪ್ರೇಮದಮಲಿನಲಿ ತೊಯ್ದ ಮೊಲೆಯ ತೊಟ್ಟುಗಳ ಕಚ್ಚಿದಾಗ, ಹುಸಿಮುನಿಸಿನಿಂದ ಮುಲುಗುತ್ತಿಯಲ್ಲ ಏಯ್ ಎಂದು - ಪ್ರೀತಿ ಇನ್ನೂ ಉತ್ಕಟವಾಗುತ್ತೆ ಹುಡುಗಿ. 

 ನೀ ಬರೆವ ಪ್ರತಿ ಸಾಲಿನಲೂ ಸರಸದ ಸೊಗಡಿದೆ ಹುಡುಗಿ

 ಚಳಿಗೆ ಅದರುತಿವೆ ಅಧರಗಳು, ಬಾ ಹುಡುಗಿ ತಿಕ್ಕಿ ತೀಡಿ ಕಿಡಿ ಹೊತ್ತಿಸೋಣ

ತುಟಿಗೆ ತುಟಿ ತಾಕಿ ಹತ್ತಿದ ಕಿಡಿ, ಕಾಡ್ಗಿಚ್ಚಾಗಿ ಹರಡಬೇಕು ಮೈ ಮನಸಿಗೆ, 

ಸಾವಕಾಶ ಮಾಡಬೇಡ, ಮುತ್ತಿನ ಮುಲಾಮು ಹಚ್ಚೋಣ ಒಬ್ಬರಿಗೊಬ್ಬರು, ಆಸೆ ಮೋಹಗಳೆಲ್ಲ ಸುಟ್ಟು ಕರಕಲಾಗುವ ಮುನ್ನ

 ದಿನದ ಧಾವಂತದಲಿ ಕಳೆದು ಹೋದ ಬದುಕನ್ನು, ಇರುಳಲ್ಲಿ ಟಾರ್ಚು ಹಾಕಿ ಹುಡುಕುತ್ತಿರುವೆ

ಟಾರ್ಚು ಕೊಳ್ಳಲು ಕಾಸು ಬೇಕು, ಮರುದಿನ ಮತ್ತದೇ ಧಾವಂತ

 ಬೆಟ್ಟದ ಮೇಲೊಂದು ಮನೆ, ಮನೆಯಂಗಳದಲಿ ತಾರಾಮೇಳ

ಕೇಳಲೊಂದು ಕಥೆ, ಗುನುಗಲೊಂದು ಹಾಡು, ಹೊತ್ತು ಕಳೆಯಲು ಹಾಳು-ಹರಟೆ

ಇಷ್ಟಿದ್ದರೆ ಸಾಕು, ಇಗೋ ನಾ ಹೊರಟೆ

 ಹೆಸರು ಪೂರ್ಣಚಂದ್ರ, ಪರಿಪೂರ್ಣ ವ್ಯಕ್ತಿತ್ವ

ಎಂದೂ ಮಾಸದ ಯಾವತ್ತಿಗೂ ಆರದ ತೇಜಸ್ಸು

ಸರ್ವಜ್ಞನೂ ಅಸೂಯೆ ಪಡುವ ಅಪರಿಮಿತ ಜ್ಞಾನ ಭಂಡಾರ

ಕೌತುಕಕ್ಕೂ ಕುತೂಹಲ ಮೂಡಿಸುವ ಮೂಡಿಗೆರೆಯ ಮೋಡಿಗಾರ

 ಗೋಪಾಲನೋ ಗೊತ್ತು ಗುರಿಯಿಲ್ಲದ ಕೊಳನೂದುವ ಗೊಲ್ಲ, ನವಿಲು ಗರಿಯೇ ಅವನ ಆಸ್ತಿ

ಬೃಂದಾವನದಲಿ ರಾಧೆಯೊಂದಿಗೆ ರಾಸಲೀಲೆ,


ಗೋವಿಂದನೋ ಕರ್ತವ್ಯದ ಕಟ್ಟುಪಾಡಿನಲಿ ಕಪ್ಪುಗಟ್ಟಿದ ಕೃಷ್ಣ

ಅರಮನೆಯ ವೈಭೋಗ, ರುಕ್ಮಿಣಿಯ ಸಾಂಗತ್ಯ, ಕೇವಲ ಸಾಂಸಾರಿಕ ಸಂಕೋಲೆ

ಹ್ಯಾಗೆ ಹೇಳೋದು ನಮ್ಮೂರ ಬಗ್ಗೆ,

ಮಲೆನಾಡಿನ ಹಸಿರಿನ ನಟ್ಟ ನಡುವೆ ಸುಪ್ತವಾಗಿ ಮಲಗಿರುವ ಸುಂದರ ಗ್ರಾಮವೆಂದಾಗಲಿ,
ದಿನವೂ ಅಲೆಗಳ ಮೊರೆತಕ್ಕೆ ಎದ್ದೇಳುವ ಕಡಲ ಕಿನ್ನರಿಯೆಂದಾಗಲಿ,
ಪರ್ವತದ ಇಳಿಜಾರಲ್ಲಿ ಬೆರಳ ತುದಿಯ ಮೇಲೆ ನಿಂತು ಮೋಡಗಳ ಮಧ್ಯೆ ಮುಗಿಲ ಚುಂಬಿಸುವ ಮಾಯಾವಿ ಎಂದಾಗಲಿ, ಊಹೂಂ , ಇದ್ಯಾವುದೂ ಅಲ್ಲದ ಅತಿ ಸಾಧಾರಣ ಊರದು.
ಹೊಸತನ ಹೊತ್ತು ತರಲು ಕನಿಷ್ಠ ಪಕ್ಷ ಒಂದು ಸಣ್ಣ ತೊರೆಯೂ ಇರದ,
ಬಯಲು ಸೀಮೆಯ ಇತ್ತ ಕುಗ್ರಾಮವೂ ಅಲ್ಲದ, ಅತ್ತ ಸುಂದರ ಸುಶೀಲ ಸಂಪತ್ಭರಿತವೂ ಅಲ್ಲದ,
ಒಟ್ಟಿನಲ್ಲಿ ಏನೆಂದರೆ ಏನೂ ವಿಶೇಷತೆ ಇಲ್ಲದ ಜಾಗವದು.

ಆದರೂ ಜಗತ್ತಿನ ಎಲ್ಲ ಜಾಗಗಳಿಗೂ ಅವುಗಳದೆ ಆದ ಕಥೆಗಳಿವೆ. ಅತಿ ಸಾಮಾನ್ಯವಾದ ಇವುಗಳಲ್ಲಿ ಕೇಳುವ ಮನಗಳಿಗೆ ವಿಶೇಷತೆ ಕಂಡರೂ ಅಚ್ಚರಿಯಿಲ್ಲ.
ಅದಕ್ಕೆಂದೇ ಇವತ್ತು ನಮ್ಮೂರ ಖಜಾನೆಯಿಂದ ಕಥೆಯೊಂದ ತಂದಿರುವೆ, ಕೇಳಿ ಸ್ವಲ್ಪ ತಾಳ್ಮೆಯಿಂದ. ಬೇಜಾರಾದರೆ, ಮೊದಲೇ ಹೇಳಿದೆನಲ್ಲ, ಸಾಮಾನ್ಯ ಊರೆಂದು, ಬಿಟ್ಟು ಬಿಡಿ.
ಇಷ್ಟವಾದರೆ ಒಮ್ಮೆ ಭೇಟಿ ಕೊಡಿ. ನಿಮಗೆ ಇನ್ನೊಂದು ಕಥೆ ಸಿಗಬಹುದು

ಈ ಕಥೆ ನಡೆಯುವುದು ಕಡು ಬೇಸಿಗೆಯ ಕಾಲವಾದ, ವೈಶಾಖ ಕಳೆದು ಜ್ಯೇಷ್ಠ ಮಾಸ ಶುರುವಾಗುವ ಸಮಯದಲ್ಲಿ, ಚಂದಿರ ಪುನರ್ಜನ್ಮ ಪಡೆವ ಅಮವ್ಯಾಸೆಯ ದಿನದಂದು. ದಿನವೆಂದರೆ ಬರೀ ಹಗಲಲ್ಲ ಮತ್ತೆ, ಹೆಚ್ಚು ಕಡಿಮೆ ಪೂರ್ತಿ ದಿನ.

ಕಥೆ ನಡೆಯುವ ಜಾಗಕ್ಕೆ ತಲುಪಲು, ನಾವು ಜಿಲ್ಲಾ ಕೇಂದ್ರವಾದ ವಿಜಯಪುರದಿಂದ ಅಥಣಿ ಮಾರ್ಗವಾಗಿ ಹೋಗುವ ಬಸ್ಸು ಹತ್ತಬೇಕು. ಅಬ್ಬಬ್ಬಾ ಅಂದರೆ 30 ನಿಮಿಷದಲ್ಲಿ ಬಸ್ಸು ನಮೂರ ನಿಲ್ದಾಣ ಸೇರುತ್ತೆ.
ನಿಲ್ದಾಣವೆಂದರೆ ಬೆರೆನಲ್ಲ, ಅದೇ ರಸ್ತೆಯ ಮೇಲೆ ತಾತ್ಕಾಲಿಕ ನಿಲುಗಡೆ . ಅಕ್ಕ ಪಕ್ಕ ಒಂದಿಷ್ಟು ಹೋಟೆಲು ಅಂಗಡಿಗಳು. ಹೋಟೆಲೆಂದರೆ ಮತ್ತೇನಲ್ಲ, ಖಾರ ಚುರುಮುರಿ , ಬಜ್ಜಿ , ಚಹಾ ಅಷ್ಟೇ.
ಒಂದು ಸರಿಯಾದ ನಿಲ್ದಾಣವಿಲ್ಲದಿದ್ದರೂ, ಎಲ್ಲ ವೇಗದೂತ ಬಸ್ಸುಗಳೂ ಸಹ ತುಸು ನಿಂತು ಹೋಗುವ ಹಿರಿಮೆ ನಮ್ಮೂರಿನದು.
ಒಂದೇ ಉಸಿರಿನಲ್ಲಿ ಓಡಿದರೆ, ಐದೇ ನಿಮಿಷದಲಿ ಊರಿನ ಬೇರೆ ತುದಿ ತಲುಪುವಷ್ಟು ಚಿಕ್ಕ ಗ್ರಾಮ, ಆದರೂ ಎರಡೆರಡು ಬಸ್ಸು ನಿಲ್ದಾಣಗಳು, ಮ್ಯಾಲಿನ ಲೈನು, ತೇಳಗಿನ ಲೈನು.
ಯಾರು ಮೇಲೆ ಕೆಳಗೆ ಗುರುತು ಮಾಡಿದರೊ ಗೊತ್ತಿಲ್ಲ. ಲೈನು ಅಂದರೇನೆಂದು ಕೇಳಲೇಬೇಡಿ.

ಮೇಲಿನ ಲೈನ್ ಅಲ್ಲಿ ಇಳಿದು, ಬಲಗಡೆಯ ರಸ್ತೆಯ ಹಿಡಿದು ಊರ ಕಡೆ ನಡೆಯಿರಿ.
ಹಾ, ಆ ನಿಮ್ಮ ಎತ್ತಿನ ಗಾಡಿಯಂತೆ ಚಕ್ರವಿರುವ ಬ್ಯಾಗುಗಳನ್ನ ತಂದಿಲ್ಲ ತಾನೇ. ನಮೂರಲ್ಲಿ ಕಾಂಕ್ರೀಟ್ ರಸ್ತೆಗಳು ಧಾವಂತ ಹೂಡಿಲ್ಲ. ತಗ್ಗು ತಗ್ಗಾದ ಮಣ್ಣಿನ ರಸ್ತೆಗಳು, ನಡುನಡುವೆ ಬಚ್ಚಲು ನೀರು ಹೋಗಲು ಮಾಡಿರುವ ಕಾಲುವೆಗಳು. ಹುಷಾರಾಗಿ ದಾಟಿ ಆಯ್ತಾ.

ಹೀಗೆ, ನಡೆಯುತ್ತ ಹಾರುತ್ತ ಕಿರಿದಾದ ಸಂದು ಗೊಂದುಗಳನು ದಾಟಿ ಬಂದರೆ ನಿಮಗೊಂದು ದೊಡ್ಡ ಆಲದ ಮರ ಕಾಣುತ್ತದೆ. ಅದರ ಒಂದು ಕಡೆ ಬಸವಣ್ಣನ ಗುಡಿ ಇನ್ನೊಂದೆಡೆ ರಸ್ತೆ ಮಧ್ಯೆ ಸಣ್ಣ ಕಟ್ಟೆ. ಅದೇ ಹೊಳೀಕಟ್ಟೆ.
ಅಲ್ಲಿಗೆ ಬಂದ ರಸ್ತೆಯ ನೇರಕ್ಕೆ ಕಾಣುವ ಓಣಿಯ ಹೆಸರು ಮಂಗೊಂಡರ ಓಣಿ.
ನಿಮ್ಮ ನೇರಕ್ಕಿರುವ ರಸ್ತೆ ಬಳಸಿ ಒಳ ಬನ್ನಿ. ಸ್ವಲ್ಪ ಮುಂದೆ ದೊಡ್ಡದೊಂದು (ಅಕ್ಕ ಪಕ್ಕದಕ್ಕಿಂತ ಅಷ್ಟೇ) ಎರಡಂತಸ್ತಿನ ಮನೆಯೊಂದು ಕಾಣುತ್ತದೆ. ಅದೇ ಮಹಡಿ ಮನೆ, ಊರಿನವರ ಮಾತಲ್ಲಿ ಮಾಡೆದ ಮನೆ. ನಮ್ಮಪ್ಪ ಹುಟ್ಟಿ ಬೆಳೆದ, ನಾನು ಬಾಲ್ಯದಲ್ಲಿ ಆಡಿ ಓಡಾಡಿದ ಮನೆ.
ಈ ಮನೆಗೆ ಊರಲ್ಲಿ ಅದರದೇ ಆದ ಗೌರವಾನ್ವಿತ ಸ್ಥಾನವಿದೆ. ಈ ಕಥೆಯಲ್ಲಿ ನಿಗೂಢ ಕುತೂಹಲಕಾರಿಯಾದ ಹಿನ್ನಲೆಯಿದೆ. ಇಷ್ಟು ಸಾಕು, ಈಗ ಬೇರೊಂದು ಸಮಯದ ಬೇರೊಂದು ಲೋಕಕ್ಕೆ ಹೋಗೋಣ.

ಕಡುಬಿಸಿಲಿನ ಬೇಸಿಗೆಯ ದಿನಗಳವು. ಬೆಳೆದ ಬೆಳಯನ್ನೆಲ್ಲ ರಾಶಿ ಮಾಡಿ ಮನೆಗೆ ಸಾಗಿಯಾಗಿದೆ. ಮಳೆಗಾಲ ಇನ್ನೂ ಸ್ವಲ್ಪ ದೂರ. ಊರ ಗಂಡು ಹೆಣ್ಣುಗಳಿಗೆ ಮಾಡಲು ಕೆಲಸವಿಲ್ಲ. ಅಂತ ಆ ಊರಿಗೆ ಪಾಳೆಯಗಾರ್ತಿ ಒಬ್ಬಳಿದ್ದಾಳೆ. ಹೆಸರು ಬನಶಂಕರಿ. ನೋಡಲು ರಣಚಂಡಿ, ರೂಪದಂತೆ ಗುಣ, ಹುಟ್ಟು ಗಯ್ಯಾಳಿ, ಜಗಳಗಂಟಿ.
ಈ ಊರಿನವರಿಗೂ ಪಕ್ಕದೂರಿನವರಿಗೂ ಆಗಾಗ ಜಗಳ ಮೈ ಕೈ ಇದ್ದಿದ್ದೇ. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದುಂಟು. ಎಲ್ಲ ಜಗಳದಲ್ಲೂ ಇವಳೇ ಮುಂದಾಳು.
ಇತ್ತೀಚಿಗೆ ಸುದ್ದಿ ಬಂದಿದೆ. ಪಕ್ಕದೂರಿನ ಪುಂಡರು ದರೊಡೆಯಲಿ ತೊಡಗಿದ್ದಾರೆಂದು. ಯಾವುದೇ ರಾಜತಾಂತ್ರಿಕ ಎಚ್ಚರಿಕೆಗಳು ಫಲ ಕೊಡುತ್ತಿಲ್ಲ. ಕೊನೆಗೆ ಉಳಿದಿರುವದು ದೊಣ್ಣೆ ಮಾರ್ಗವೊಂದೇ. ವೈದ್ಯ ಹೇಳಿದ್ದು ರೋಗಿ ಬಯಸಿದ್ದು ಒಂದೇ ಎನ್ನುವಂತೆ, ಖಾಲಿ ಕುಳಿತ ಊರ ಪುಂಡರೂ ಅದಕ್ಕೆ ಕಾಯುತ್ತಿದ್ದರೆನ್ನಿ.

ಯುದ್ಧ ಘೋಷಣೆಯಾಗಿಯೇ ಬಿಟ್ಟಿತು. ಎರಡೂ ಊರ ನಡುವೆ ಇರುವ ಸ್ಮಶಾನ ರಣಭೂಮಿ. ಮಧ್ಯ ರಾತ್ರಿಯ ತಂಪಾದ ಹೊತ್ತಲ್ಲಿ ರಣಕಹಳೆ. ದಿನದ ಬಿಸಲಲ್ಲಿ ಬೆವರು ಸುರಿಸುವವರಾರು. ಮೊದಲೇ ಸೋಮಾರಿಗಳು.

ಯುದ್ಧವೆಂದರೆ ಕೇಳಬೇಕೆ. ಎಷ್ಟೊಂದು ತಯಾರಿಯಾಗಬೇಕು. ನಿನ್ನೆ ರಾತ್ರಿಯಷ್ಟೇ, ಶಂಕರಿಯ ಸೇನಾಧಿಕಾರಿ ಮನೆಗೆ ಬಂದು ಹೋಗಿದ್ದಾಳೆ. ಮನೆಗೆ ಅಂದರೆ ಮಹಡಿ ಮನೆಗಲ್ಲ. ಪಕ್ಕದಲ್ಲಿರುವ ಮನೆಗೆ. ಮಹಡಿ ಮನೆ ಶಂಕರಿಯ ತವರು ಮನೆಯಾದರೂ, ಅಲ್ಲಿಗೆ ಅರಮನೆಯವರ ಪ್ರವೇಶವಿಲ್ಲ. ಯುದ್ಧದ ರಾತ್ರಿ ಹೊರತುಪಡಿಸಿ.  ಸಂಪ್ರದಾಯದಂತೆ, ರಾಕ್ಷಸ ರೂಪವತಿಯಾದ ಜೋಗರಾಣಿ, ಯುದ್ಧದ ಸುದ್ದಿಯನ್ನು ಮೊದಲು ಇಲ್ಲಿಗೆ ತಂದಿದ್ದಾಳೆ. ಎಲೆ ಅಡಿಕೆಯ ಸಾಂಕೇತಿಕವಾಗಿ ಕೊಟ್ಟು, ಯುದ್ಧ ಸಿದ್ಧತೆಗೆ ಅಪ್ಪಣೆಯಿಟ್ಟಿದ್ದಾಳೆ.

ಮರುದಿನ ಬೆಳಗಿನ ಸೂರ್ಯ ಸ್ವಲ್ಪ ಜಾಸ್ತಿಯೇ ಪ್ರಕಾಶಿಸುತ್ತಿದ್ದಾನೆ. ಅವನಿಗೂ ಗೊತ್ತಾಗಿರಬೇಕು
ಊರಲ್ಲೆಲ್ಲ ಚಟುವಟಿಕೆ ತೀವ್ರಗೊಂಡಿದೆ, ಏನೋ ಸಂಭ್ರಮ.
ಇತ್ತ ತವರು ಮನೆಯಲ್ಲಿ, ಎಲ್ಲರೂ ಪುರುಸೊತ್ತಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಜಗಳಕ್ಕೆ ಹೊರತು ನಿಂತಿರುವ ಸೈನ್ಯಕ್ಕೆ ಅಡುಗೆ ಮಾಡಿ ಅರಮನೆಗೆ ರವಾನಿಸಬೇಕು. ಅದಲ್ಲದೆ ಶಂಕರಿ ಮತ್ತು ಅವಳ ಸೇನಾ ತುಕಡಿಗೆ ರಾತ್ರಿ ಮನೆಯಲ್ಲಿಯೇ ಔತಣ. ಬಹು ದಿನಗಳ ನಂತರ ಮಗಳು ತವರಿಗೆ ಬರುತ್ತಿದ್ದಾಳೆ. ಅದೂ ರಣಚಂಡಿಯಾಗಿ. ವಿಶೇಷವಾಗಿ ಅವಳಿಗಿಷ್ಟವಾದ ಕೊಬ್ಬರಿ ಕಡುಬೇ ಆಗಬೇಕು ಊಟಕ್ಕೆ. ಸುಮಾರು 100-120 ಜನರ ತುಕಡಿ. ಅದಲ್ಲದೆ, ಊರ ಮಗಳ ನೋಡಿ ಹರಸಿ ಬಿಳ್ಕೊಡಲು ಬರುವ ನೆರೆ ಹೊರೆಯವರು. ಎಲ್ಲರಿಗೂ ಇಲ್ಲೇ ಊಟ.
ಊರ ಒಡತಿಯ ತವರು ಮನೆಯಾದರೂ, ಯಾವುದೇ ವಿಶೇಷ ಸೌಲಭ್ಯಗಲಿಲ್ಲ. ಎಲ್ಲರಂತೆ ಊರ ಕೆಳಗಿನ ಕೇರಿಯಲ್ಲಿರುವ ಸಿಹಿ ನೀರ ಬಾವಿಯಿಂದ ನೀರು ತರಬೇಕು. ಮನೆಯ ಗಂಡಸರೆಲ್ಲ ನೀರು ಹೊತ್ತು ತರುತ್ತಿದ್ದರೆ ಹೊತ್ತು ಹೋಗಿದ್ದೇ ಅರಿವಿಲ್ಲ. ಅದಾಗಲೇ ಸೂರ್ಯ ನೆತ್ತಿಯೇರಿ ಕುಳಿತಿದ್ದಾನೆ. ಅಂತೂ ಸೇನೆಯ ಅಡಿಗೆ ತಯಾರಾಗಿದೆ. ಅಗೋ, ಅಲ್ಲಿ ನೋಡಿ. ಊರ ಹೆಣ್ಣು ಮಕ್ಕಳೆಲ್ಲ ತಮ್ಮ ತಮ್ಮ ಅಡುಗೆ ಪಾತ್ರೆಯನ್ನ ತಲೆಯ ಮೇಲೆ ಹೊತ್ತು ಹೊರಟಿದ್ದಾರೆ, ಅರಮನೆಯೆಡೆಗೆ.
ಅಡುಗೆ ಮಾಡಿದ ದಣಿವೆಲ್ಲ, ಕನ್ನಡಿ ಮುಂದಿನ ಶೃಂಗಾರಲಿ ಕರಗಿ ಹೋಗಿದೆ. ಅರಮನೆ ನೋಡುವ ತವಕವೋ, ಯುದ್ಧದಲಿ ಭಾಗಿಯಾದ ಹೆಮ್ಮೆಯೋ, ತಮ್ಮಿಷ್ಟದ ಯೋಧನಿಗೆ ಉಣಬಡಿಸುವ ಮನದಾಸೆಯೋ, ಒಟ್ಟಿನಲಿ ಹೆಂಗಳೆಯರೆಲ್ಲ ಹಿರಿ ಹಿರಿ ಹಿಗ್ಗಿದಂತಿದೆ.

ಇತ್ತ ಗಂಡಸರು, ನೀರು ತುಂಬಿಸಿ, ರಾತ್ರಿ ಊಟಕ್ಕೆ ಬೇಕಾದ ತಟ್ಟೆ ಮತ್ತಿತ್ಯಾದಿ ಸಾಮಗ್ರಿಗಳ ತೊಳೆದು ಒಪ್ಪವಾಗಿಸಿ ಆಗಿದೆ. ಊಟದ ನಂತರದ ಎಲೆ ಅಡಿಕೆ ತಾಂಬೂಲವೂ ತಯಾರಿದೆ. ರಾತ್ರಿಗೆ ದೀವಟಿಗೆ ಪಂಜು ಸುತ್ತಿ ಇಟ್ಟಾಗಿದೆ.

ಅತ್ತ ಅರಮನೆಯಲ್ಲಿ, ಮಧ್ಯಾನ್ಹದ ಊಟ ಮುಗಿದಿದೆ. ಹೆಂಗಳೆಯರೆಲ್ಲ ಮನೆಗೆ ಮರಳುವ ಸಮಯ.
ಸೈನ್ಯಕ್ಕೆ ಪುರುಸೊತ್ತಿಲ್ಲದ ಅವಸರ. ಕೊನೆಯದಾಗಿ ಕತ್ತಿವರಸೆಯ ಅಭ್ಯಾಸವಾಗಬೇಕು. ಅದಕ್ಕೂ ಮುಂಚೆ ಶಂಕರಿಯ ಪ್ರಜಾ ಭೇಟಿಯಾಗಬೇಕು. ಯುದ್ಧಕ್ಕೂ ಮೊದಲು, ಊರನ್ನುದ್ದೇಶಿಸಿ ಮಾತನಾಡುವುದು ವಾಡಿಕೆ. ಅದಲ್ಲದೆ, ಮಳೆಗಾಲ ಇನ್ನೇನು ಹತ್ತಿರವೇ. ಇಂದು ರಾತ್ರಿ ಅವಳು ಮರಳಿ ಬರದಿದ್ದರೆ, ಈ ವರ್ಷದ ಹಿಂಗಾರಿನಲಿ ಕೃಷಿ ಕಾರ್ಯಗಳ ಗತಿಯೇನು. ಊರ ಒಡತಿ ಹೇಳದೆ, ಒಂದು ಬೀಜವೂ ಬಿತ್ತದು.

ಊರ ಒಡತಿ, ಜನಮನಗಳ ಅಧಿದೇವತೆ, ಚಂಡಿ ಚಾಮುಂಡಿ, ಯುದ್ಧಕ್ಕೆ ಸನ್ನದ್ಧಳಾಗಿದ್ದಾಳೆ.
ಮನೆ ಮನೆಯಿಂದ, ಬಣ್ಣ ಬಣ್ಣದ ಹೂವುಗಳ ರಾಶಿ ಬಂದಿದೆ ಅವಳ ಸಿಂಗರಿಸಲು. ಕೋಪದಿಂದ ಕೆಂಪೇರಿದ ಅವಳ ಮುಖ ರೌದ್ರವ ರೂಪ ತಾಳಿದೆ. ರೆಪ್ಪೆ ಬಡಿಯದ ಆ ಕಣ್ಣುಗಳು ಕಿಡಿ ಕಾರುತ್ತಿವೆ. ಮೂಗಿನ ಮೇಲಿನ ನತ್ತು, ತಲೆ ತುಂಬ ಮುಡಿದಿರುವ ಹೂಮಾಲೆ, ಅವಳನ್ನು ಸಾಕ್ಷಾತ್ ರಣಚಂಡಿಯಾಗಿಸಿವೆ.
ಅಂಗರಕ್ಷಕರು ಕೇಕೆ ಹಾಕುತ್ತ ಹೊರನಡೆದಿದ್ದಾರೆ. ಮುಂದೆ ಕೋಲು ಕತ್ತಿ ಹಿಡಿದ ಕೆಲವರು. ಹಿಂದೆ ಊರ ಧ್ವಜ, ಶಂಕರಿಯ ಲಾಂಛನ ಹಿಡಿದ ಗುಂಪು. ಜೊತೆಗೆ ಶಂಖ ಜಾಗಟೆ ಗಂಟೆಗಳ ಸದ್ದು. ಹೊರಟಿದ್ದಾಳೆ ಹೊಳೀಕಟ್ಟಿಯ ಕಡೆಗೆ. ಊರಿಗೆ ಊರೇ ಬಂದು ನಿಂತಿದೆ, ಒಡತಿಯ ನೋಡಲು, ಕೇಳಲು. ದಾರಿಯುದ್ದಕ್ಕೂ ಮನೆಯ ಛಾವಣಿಗಳ ಮೇಲೆ, ಗಿಡಮರಗಳ ರೆಂಬೆ ಕೊಂಬೆಗಳ ಮೇಲೆ, ಬಾಗಿಲು ಕಿಟಕಿ , ಗೋಡೆ ಗೋಪುರಗಳ ಮೇಲೆ. ಎಲ್ಲೆಂದರಲ್ಲಿ ಜನ. ಹೋಳಿಕಟ್ಟೆಯಲ್ಲಂತೂ, ಕಿಕ್ಕಿರದ ಜನಸಾಗರ, ನೂಕು ನುಗ್ಗಲು. ಅಂಗ ರಕ್ಷಕರ ಕೇಕೆ ಕೇಳುತ್ತಿದ್ದಂತೆ ಜನರ ಕೇಕೆ ಶುರು. ಎಲ್ಲ ಕೂಗು, ಕುಣಿತ ಮುಗಿದು ಜನಸ್ಥೋಮ ಕಾತರದಿ ಕಾದಿರುವ ಸಮಯ ಬಂದಿದೆ.
ವಾಡಿಕೆಯಂತೆ ಒಡತಿ ಮುಂಬರುವ ಹಿಂಗಾರಿನ ಕೃಷಿ ಕಾರ್ಯಗಳ ಪಟ್ಟಿ ಮಾಡುತ್ತಿದ್ದಾಳೆ, ನಿಯಮಾನುಸಾರವಾಗಿ. ಯುದ್ಧ ಸೋಲುವ ಮಾತೇ ಇಲ್ಲ, ಅವಳು ಮರಳಿ ಬಂದು ಖುದ್ದಾಗಿ ಮೊದಲ ನೇಗಿಲನ್ನು ಹೂಡುತ್ತಾಳೆನ್ನುವುದು ಸೂರ್ಯ ಚಂದ್ರಾದಿಯಾಗಿ ಎಲ್ಲರಿಗೂ ಗೊತ್ತು. ಸೂರ್ಯ ಮನೆಗೆ ಮರಳುತ್ತಿದ್ದಾನೆ, ಸಿದ್ಧತೆಯ ನೋಡಿ ತೃಪ್ತನಾದಂತೆ.
ಸೇನೆ ಗರಡಿ ಮನೆಯೆಡೆಗೆ ಹೊರಡುವ ಹೊತ್ತು. ಹೆಚ್ಚು ಸಮಯವಿಲ್ಲ, ಕೊನೆಯ ತಾಲಿಮಿಗೆ.

ಹೋಳಿಕಟ್ಟೆಯಿಂದ ನೇರವಾಗಿ ಸವಾರಿ ತಾಲೀಮು ಶಾಲೆಗೆ ನಡೆಯಿತು. ಇಡೀ ಸೈನ್ಯ ಕತ್ತಿವರಸೆ, ಜಂಗಿ ಕುಸ್ತಿ ಎಂದು ವಿಧವಿಧದ ಯುದ್ಧ ಸನ್ನಿವೇಶಗಳ ಅಭ್ಯಾಸದಲ್ಲಿ ಮುಳುಗಿತ್ತು.

 ಹಾರಾಡುವ ಮುಂಗುರುಳ ಬಾಚಿ ಕಟ್ಟು ಗೆಳತಿ,

ಜೋತಾಡುವ ಕಿವಿಯೋಲೆಯ ಬಿಚ್ಚಿಡು

ಮುದ್ದಾದ ಮುಖವ ಬೆತ್ತಲೆ ನೋಡುವಾಸೆ

ಕಿವಿಗೆ ತುಟಿ ಹಚ್ಚಿ ಪೋಲಿ ಪಿಸುಗುಡುವಾಗ ಉನ್ಮಾದ ಉಕ್ಕೇರುತ್ತೆ ಹುಡುಗಿ,

ಎದೆಯ ಏರಿಳಿತವಾದರೂ ಹತೋಟಿಯಲಿಡು, ಕಟ್ಟೆಯೊಡದರೆ ಕಷ್ಟ

 ಎಡೆಬಿಡದೆ ಕಾಡುತ್ತಿದೆ ನಿನ್ನ ನೆನಪು ಹುಡುಗಿ,

ಆ ನಿನ್ನ ಗುಳಿ ಕೆನ್ನೆ ಪೈಪೋಟಿಗೆ ಬಿದ್ದಿವೆ ನಯನಗಳ ಜೊತೆ,

ಯಾರು ಹಿತವರು ನನಗೆಂದು

ಈ ಮಧ್ಯೆ ಅಧರಗಳೂ ಧಾವಂತ ಹೂಡಿವೆ ನನ್ನೆದೆಯಲಿ, ನಾವೇನು ಕಮ್ಮಿಯೆಂದು

 ಗೆಳತಿ,

ಪುಟ್ಟದೊಂದು ಅರಮನೆ ಕಟ್ಟಿ, ರಾಜ ರಾಣಿ ಹಾಗಿರುವುದು ನನ್ನ ಕನಸಲ್ಲ,

ಊರೂರು ಸುತ್ತಬೇಕು ನಿನ್ನ ಜೊತೆ, ಗೊತ್ತು ಗುರಿಯಿರದ ಅಲೆಮಾರಿಯಂತೆ.

ಇಂದು ಈ ಊರು , ನಾಳೆ ಆ ಊರು, ನಾಡಿದ್ದು ಎಲ್ಲಿಗೋ ಯಾರಿಗೊತ್ತು

ಸಮಯಕ್ಕೆ ಬಸ್ಸು ಬಾರದೆ, ರಾತ್ರಿಯೆಲ್ಲ ರಸ್ತೆಯಲಿ ಕುಂತಾಗ, ಸ್ವಲ್ಪ ಜಗಳ ಸ್ವಲ್ಪ ನಿದ್ದೆ , ಹಾ ಸ್ವಲ್ಪ .. ಇಲ್ಲಾ ಜಾಸ್ತಿನೇ ಗಂಭೀರ ಚಿಂತನೆ.

ಭಾಷೆ ಬಾರದ ಬೀದಿಯಲಿ, ಮಿಕ್ಕೆಲ್ಲ ಭಾಷೆಗಳ ಮೇಳೈಸಿ ಮಾತಾಡಿ , ಹೇಗೋ ಸಂಭಾಳಿಸೋಣ

ಕಣ್ಣಿಗೆ ಕಂಡ ತಿಂಡಿ ತಿನಿಸುಗಳ ಹೆಸರು ಕೇಳದೆ ತಿನ್ನೋಣ


 ಬರೋಬ್ಬರಿ ಏಳು ದಿನಾ ಆಯ್ತು ಇವತ್ತಿಗಿ,

ನನ್ನ ನಿನ್ನ ಸಂಬಂಧ ಶುರು ಆಗಿ

ಬರೀ ನಾನೇ ಮಾತಾಡುದು ಆಯ್ತು , ನೀ ಒಂದ್ 

ಶಬ್ದಾನು ಹೇಳವಲ್ಲಿ.

ಯಾಕಿಷ್ಟು ಸಿಟ್ಟು ನನ ಮ್ಯಾಲ ? 

ನಿನ ಮೈ ಮ್ಯಾಲಿನ ಒಂದೊಂದು ಉಬ್ಬು-ತಗ್ಗು ಬಲ್ಲೆ ನಾ,

ಇನ್ನೂ ಏನು ಮುಚ್ಚು ಮರೆ ?

ನಿನ್ನ ಬಿಟ್ಟಿರಲಾರದಷ್ಟು ಹಚಗೊಂಡಿನಿ, ಬಾಜೂ ಮನಿ ಗ್ವಾಡಿ ಸಹ ನೋಡುದು ಬಿಟ್ಟಿನಿ

ನಿನ ಅಂತರಾಳ ಬಿಚ್ಚಿಡುದೇನ ಬ್ಯಾಡ, ಸ್ವಲ್ಪೇ ಸ್ವಲ್ಪ ಮಾತಾಡಲಾ,

ಈ ಲಿವ್ಇನ್ ಸಂಸಾರ ಇನ್ನಾ ಹದಿನಾಲ್ಕ್ ದಿನಾ ಅಷ್ಟೇ,

ಅದಾದ ಮ್ಯಾಲ ವಿಚ್ಛೇದನ ಇದ್ದಿದೆ

 ಗೆಳತಿ,

ಗುಡ್ಡ ಬೆಟ್ಟಗಳ ಸುತ್ತಬೇಕು ನಿನ್ನಜೊತೆ,

ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ಗಂಭೀರವಾಗಿ ಸಮಾಲೋಚಿಸುತ್ತ

ಸವೆದ ಹಾದಿ - ಕಳೆದ(ಪಡೆದ) ಸಮಯ, ಎರಡೂ ನೆನಪಿರದಂತೆ.

ಜೀವನವೂ ಹಾಗೇ ಅಲ್ಲವೇ ಹುಡುಗಿ,

ಎಲ್ಲರಿಗೂ ಬೇಕಿರುವ- ಯಾರೂ ನೆನಪಿಡದ

ಮೈಲುಗಲ್ಲುಗಳ ಸರಮಾಲೆ.

ಬಿಸಿಲು ನೆತ್ತಿಗೇರಿದೆ ಬೆಡಗಿ,

ಬೆಟ್ಟದ ತುದಿ ತಲುಪುವರೆಗೂ ಜಗಳವಾಡಬೇಕು,

ಮೇಲೆ ಮುಸ್ಸಂಜೆ ಮಬ್ಬಲ್ಲಿ, ಮಾತಿಲ್ಲದೆ ಮೈಮರೆಯಬೇಕು ಸೂರ್ಯ ಮರೆಯಾಗುವರೆಗೂ

ಆ ಚುಮುಚುಮು ಚಳಿಯ ಮುಂಜಾವಿನಲಿ , ಬಿಗಿದಪ್ಪಿ ಮುತ್ತಾಡುವ ಆಸೆ ನನದಲ್ಲ ಗೆಳತಿ,

ಸುಮ್ಮನೆ ಆನಿಸು ನನ್ನೆದೆಯ ಮೇಲೆ, ಹುಲ್ಲು ಹಾಸಿನ  ಮೇಲೆ ಕೂತ ಇಬ್ಬನಿಯಂತೆ. ಹಾ, ಇಬ್ಬನಿಯಂತೆ ! ಸ್ವಲ್ಪ ಸಮಯ ಮಾತ್ರ !

ಜೀವನದ ದಿನ ದೊಡ್ಡದಿದೆ ಗೆಳತಿ, ಸಾಂಸಾರಿಕ ಸಂಗತಿಗಳ ನೋಡಬೇಡವೆ?

ಅಯ್ಯೋ, ನೀನೇನು ಹೆದರಬೇಡ ಮಾರಾಯ್ತಿ,

ಹಾಲು ಕಾಯಿಸಿ ಕಾಫಿ ಮಾಡಿದರೆ ಸರಿ

ಬೆಳಿಗ್ಗೆಯ ತಿಂಡಿ ನನ್ನ ಜವಾಬ್ದಾರಿ

ಸೂರ್ಯ ಸಿಟ್ಟಾಗಿ ಸುಡುವದರೊಳಗೆ ಕೆಳಗಿಳಿದು ಬಿಡಬೇಕು

ಜನ ಜಂಗುಳಿಯ ಬಜಾರಿನಲಿ ಕಳೆದು ಹೋಗೋಣ,

ನಾಳೆ ಮತ್ತೊಂದು ದಿನ, ಮಗದೊಂದು ಬೆಟ್ಟ - ಇವತ್ತಿಗಿಷ್ಟು ಸಾಕು

ಪರದೇಶ

 ಭುವಿಗೆ ತಂಪೆರದು ಮನಸಿಗೆ ಮುದ ನೀಡುವ ಸೋನೆಮಳೆ , 

ಕೋಪದಲಿ ರಪರಪನೆ ರಾಚುತ್ತಿದೆ |

ನಿತ್ಯ ಜೀವನದ ಗಂಟೆ ಜಾಗಟೆಗಳೆಲ್ಲ ಮಾತು ಕಳೆದು ಮೌನವಾಗಿವೆ, ಜೀವಂತಿಕೆಯ ಸದ್ದಿಲ್ಲದೆ 

ಬಣ್ಣ ಬಣ್ಣದ ಎಲೆ ಮರಗಳ ನಡುವೆ ಮಾಸಿ ಹೋದ ಮನಸುಗಳು,

ವೈಯ್ಯಕ್ತಿಕ ಸಮಯಕ್ಕೂ ವೇಳಾಪಟ್ಟಿ, ಸದ್ದಿಲ್ಲದೆ ಸತ್ತಿವೆ ಕನಸುಗಳು

ಎಚ್ಚರಿಕೆ ! ಸ್ವಚ್ಛ ಗಾಳಿಯಿದೆ ಇಲ್ಲಿ , ಉಸಿರುಗಟ್ಟುವ ವಾತಾವರಣ