Monday, December 19, 2016

ಹುಡುಕಾಟ

ಮಲೆಗಳಲಿ ಮದುಮಗಳ ಅರಸಿ ಬಂದವ ನಾನು, ಮನ ಗೆದ್ದವಳು ಮಾತ್ರ ಕಾನೂರು ಹೆಗ್ಗಡತಿ |
ಸಂಗ್ಯ-ಬಾಳ್ಯರ ಹುಚ್ಚೆದ್ದು ಹುಡುಕುವಾಗ, ಗಕ್ಕನೆ ಕಂಡದ್ದು ಸಿಂಗಾರವ್ವನ ಅರಮನೆಯ ಒಡತಿ|
ಘಟಶ್ರಾಧ್ಧದಲಿ ಕಂಡ ನಾಟಕೀಯತೆ ಅರ್ಥವಾದದ್ದು ಸಂಸ್ಕಾರ ಕೆದಡಿದಾಗ|
ಪ್ಯಾಪಿಲಾನ್  ಮಹಾ ಪಲಾಯನಗೈಯ್ಯಲು; ಕಿರಗೂರಿನ ಗಯ್ಯಾಳಿಗಳು ಕಾರ್ವಲೋಗೆ ಬಡಿದರು, ಜುಗಾರಿ ಕ್ರಾಸಿನಲಿ!
ಈ ಚಿದಂಬರ ರಹಸ್ಯ ಅರಿಯೆನು ನಾನೀಗ|
ಕವಲು ದಾರಿಗಳಲಿ ಕಂಗೆಟ್ಟ ಮನಸಿಗೆ ಕೊನೆಗೂ ಪರ್ವ,
ಮೂಕಜ್ಜಿಯ ಕನಸುಗಳ ಕಂಡ ಕಣ್ಣಿಗೆ ಅದೆಂತದೋ ಗರ್ವ |

??

ಮುಂಜಾವಿನ ಮಂಜಿನಲಿ ಮೂಕಜ್ಜಿಯ ಕನಸುಗಳ ಹುಡುಕಿ ಹೊರಟವ ನಾನು |
ಜಟಿಲ ಜೀವನದ ಸರಳಾನುವಾದಕೆ ಬೆರಗಾದೆ!
ಬೆಟ್ಟದ ಜೀವಗಳ ರೋದನೆಗೆ ಚೋಮನ ದುಡಿಯ ದನಿಗೂಡಲು,
ಚಿಗುರಿದ ಕನಸಿನ ಮೇಲೆಯೇ ಅನುಮಾನ|
ಮಣ್ಣಿಗೆ ಮರಳುವುದೇ ಅಂತಿಮ ಸತ್ಯವೆನೆ, ಕನಸು ಕನಸಿನ ನಡುವೇಕೆ ತಾರತಮ್ಯ?
ಕನಸು ಕಾಣುವ ಕಣ್ಣುಗಳು ಬೇರೆ, ಆದರೇನು? ಕನಸಿನ ಚಿತ್ರಪಟ ಬಿಡಿಸುವವ ಒಬ್ಬನೇ ಅಲ್ಲವೇ?

Tuesday, October 25, 2016

ತಾಯ ಎದೆಹಾಲು ಬತ್ತಿಹುದು, ಮಕ್ಕಳಿಬ್ಬರ ನಡುವೆ ಕಿತ್ತಾಟ |
ಕಿವುಡು ಕಂದಮ್ಮಗಳಿವು;
ಹಾಲು ಕುಡಿದ ಬಾಯಿಂದ ಕಕ್ಕುತಿಹವು ಹಾಲಹಲ,
ತಾಯ ಕರುಳ ಕಳವಳ ಕೇಳುವವರಾರಿಲ್ಲ ||

ಕೊಡಗಿನ ಕಾವೇರಿ, ಕರ್ನಾಟಕದ ಕಂದಮ್ಮ;
ಕನ್ನಡ ನಾಡಿನ ಹೆಮ್ಮೆಯ ಮನೆ ಮಗಳು |

ಗಂಡನ ಮನೆ ಸೇರುವುದು ಹೆಣ್ಣು ಜೀವಕೆ ಅನಿವಾರ್ಯ; ಹಾಗೆಂದ ಮಾತ್ರಕೆ, ಅವಳ ಕದಿಯುವುದು ತರವಲ್ಲ|
ತವರು ಖುಷಿಯಿಂದ ಉಡಿ ತುಂಬಿ ಕಳಿಸಿ ಕೊಡಬೇಕಲ್ಲ !

ಸರಿಯಾದ ಸಮಯದಲಿ ಬಿಳ್ಕೊಡುವೆವು ನಾವು, ಅಲ್ಲಿಯವರೆಗೂ ತಾಳ್ಮೆಯಿಂದಿರಿ ನೀವು|

ಮುತ್ತೈದೆ ಭಾಗ್ಯವ ಕಸಿಯೊ ಕೆಟ್ಟವರು ನಾವಲ್ಲ|
ಹೊಸ ಮನೆಯ ಬೆಳಗಿ ತವರು ಕೀರ್ತಿ ಹೆಚ್ಚಿದರೆ, ನಮ್ಮ ಮನಸಿಗೆ ಸಕ್ಕರೆ ಬೆಲ್ಲ |


ನಮ್ಮೂರ ಕಂದಮ್ಮ ಕಾವೇರಿ,
ಮಲೆನಾಡ ಮೈ ಸಿರಿ.
ಕೊಡಗಿನ ಕೂಸು-ಕನ್ನಡ ಕಸ್ತೂರಿ |
ದಿನವೆಲ್ಲ ಕುಣಿಡಾಟ, ಅಲ್ಲಲ್ಲಿ ತುಂಟಾಟ
ಅವಳ ತಳುಕು ಬಳುಕು ನೋಡುವುದೇ ಚೆಂದ.
ಆ ದೇವಿ ನಕ್ಕರೆ; ನಾಡೆಲ್ಲ ಹಸಿರು,
ಉಸಿರೆಲ್ಲ ನವಿರು ||

ಕನ್ಯೆಯಾದಾಗವಳ ಸಂಭ್ರಮವ ನೋಡಬೇಕು-
ತಳುಕಿನ ಆ ಬಳುಕಿನಲಿ, ಭೂ ತಾಯಿಯ ಗಾಂಭೀರ್ಯ.
ಆಕಾಶದ ಅಪ್ಸರೆಯರೂ ನಾಚಬೇಕು, ಅಂತ ಸೌಂದರ್ಯ!
ಪ್ರತಿ ಕ್ಷಣ ಹೊಸ ಪುಳಕ; ವೈಭವದ ವೈಯ್ಯಾರ; ಬೆಡಗು ಬಿನ್ನಾಣ ||

ಪುಳಕದ ಸೆಲೆಯೊಳಗೆ ಅಳುಕಿನ ಹೊಂಚಿಕೆ !
ಒಂದು ಹೆಣ್ಣು-ಆರು ಕಣ್ಣು.. ಅಲ್ಲಲ್ಲ ನಮ್ಮ ಕಾವೇರಿ ಮೇಲೆ ನೂರಾರು ಕಣ್ಣು. ||

ನೋಡಿ ತೀರದ ದಾಹ, ಕಣ್ಣಿಗೆ ; ಹುಲಿ ಉಗುರು !
ಎಲ್ಲಾರಿಗೂ ಅವರವರದೇ ಅನುಕೂಲ, ಬೇಡಿಕೆ, ಸ್ವಾರ್ಥ |
ದಾರಿಯುದ್ದಕ್ಕೂ ಅವಳು ಸೆರಿಯಾಳು ||

ಕಳೆದು ಹೋದ ಕವನಗಳ ಹುಡುಕಿ ತರುವ ಯತ್ನದಲ್ಲಿ,
ಮರೆತು ಹೋದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ,
ಮಂಪರಿನಿಂದ ಮುದುಡಿ ಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||

ಎಂದೋ ಅರ್ಥೈಸಿದ ಮೊದಲ ಚರಣವೇ ತಿಳಿಯುತ್ತಿಲ್ಲ !
ಇನ್ನು ಕೊನೆಯ ಸಾಲುಗಳ ಮಾತೆಲ್ಲಿ ?

ಬರೆಯುವುದ ಬಿಟ್ಟರೆ ಶಬ್ದಗಳೂ ಬದುಕವು ತಲೆಯೊಳಗೆ,
ಈಗ ಬರೆಯಬೇಕೆಂದರೂ ಬಾರವು ಲೇಖನಿಯ ತುದಿಗೆ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ ! ||

ನಾನೇ ಗೀಚಿದ ಸಾಲುಗಳು, ಕೇಳಿದಂತಿವೆ;
ನನಗೂ-ನಿನಗೂ ಎಲ್ಲಿಯ ಸಂಬಂಧ!?

ಕದನವೊಂದು ಒಡಮಾಡಿದೆ ಮನದ ಮೂಲೆಯಲಿ,
ಸಂಧಾನವಾಗದಿರೆ ಯುದ್ಧವಾದೀತು !

ಯಾವುದು ಮುಖ್ಯ ಕವಿತೆಗೆ; ಶಬ್ದವೋ? ಸಾರಾಂಶವೋ?

ದನಿಯೊಂದು ಉಸುರಿತು, ಮನದ ಮೂಲೆಯಲಿ;
ಶಬ್ದ ಬರಿ ಸಂವಹನ ಮಾಧ್ಯಮ,
ಬಾಹ್ಯ ಸೌಂದರ್ಯಕ್ಕೆ ಮರುಳಾಗಾದಿರು ಮೂಢ!
ಕಣ್ಣಿನಲಿ ಹೇಳುವ ಕವಿತೆಗೆ ಅಕ್ಷರ ಮಾಲೆ ಬೇಕೇನು?

ಇನ್ನಾವುದೋ ಅರಚುತಿಹುದು !
ಶಬ್ದಗಳೇ ಅಲ್ಲವೇ ಕಾವ್ಯಕ್ಕೆ ಶೃಂಗಾರ,
ಶೃಂಗಾರವಿರದ ಸಪ್ಪೆಯ ಮೂಸುವುದು ಯಾರಾ?

ಆದರೆನ್ನ ಬುದ್ಧಿಗೆ ಜಾಣ ಕಿವುಡು ! ||

ಕಾವ್ಯ ಸೃಷ್ಠಿಯ ಕದನದಲಿ ಪದಗಳಿಗೆ ದನಿಯಿಲ್ಲ,
ಎಷ್ಟು ಹೆಕ್ಕಿ-ಹುಡುಕಿದರೂ ಶಬ್ದಗಳೇ ಸಿಗುತ್ತಿಲ್ಲ |

ಮೊದಲಿನಿಂದ ಶುರು ಮಾಡಬೇಕಿದೆ, ನಾ, ಅರ್ಧ ಬರೆದ ಕವಿತೆ !

ಹೊಸದಾಗಿ ಹೊಸೆಯಬೇಕಿದೆ ಅವೇ ಹಳೆಯ ಶಬ್ದಗಳ|
ಮೂಡಿಬರಬೇಕಾಗಿದೆ ಮುಂಜಾನೆ ಕವಿತೆ; ಗೋಧೂಳಿ ಕವನ,
ಏನಾದರಾಗಲಿ ಶುರು ಮಾಡಬೇಕಿದೆಯಣ್ಣ;
ಅರ್ಧ ಬರೆದ ಕವಿತೆ ||