Saturday, December 17, 2011

ಸುಮ್ಮನೆ ನಗುವವರೆಲ್ಲ ಹುಚ್ಚರಲ್ಲ
ನಗಲೂ ಕೂಡ ಕಾರಣ ಕೇಳುವಂತಾಯಿತಲ್ಲ !
ಮನ ರೋದಿಸುವಾಗ ಕೇಳಲಿಲ್ಲ ;
ವೇದನೆಯ ಕಾರಣ.
ನಗುವಾಗ ಮಾತ್ರ ಕಾರಣ ಕೇಳಿ ತಿಂತಿರಾ ಪ್ರಾಣ ||
ಕಾರಣಕ್ಕಾಗಿ ಮೂಡಿದ ನಗು ಕ್ಷಣಿಕ ; ಮಿಂಚಿನಂತೆ ಮಾಯ
ಕಾರಣ ಕೇಳದೆ ಬೆಳೆದ ನಗುವಿಗೆ ಚಿರ ಯೌವ್ವನ ಪ್ರಾಯ ||
ನಗಬೇಕೆನಿಸಿದರೆ ನಕ್ಕು ಬಿಡಿ ;
ಆಮೇಲೆ ಏಕೆ ನಕ್ಕೆ ಎಂದು ವಿಚಾರ ಮಾಡಿ |
ಆಗ ಮನ ಮುದಗೊಳ್ಳುವುದು ಆ ನಗು ಮತ್ತೊಮ್ಮೆ ಮೂಡಿ ||

Friday, April 8, 2011

ಹೌದು ತಪ್ಪು ನನ್ನದೇ !

ಹೌದು ತಪ್ಪು ನನ್ನದೇ !

ನೀ ತಡೆದೆ; ನಾ ಹತ್ತಿರ ಬಂದೆ

ನೀ ಗೆಳತಿಯಾದೆ; ನಾ ಆತ್ಮೀಯಳೆಂದುಕೊಂಡೆ

ಹೌದು ತಪ್ಪು ನನ್ನದೇ !

ಎಲ್ಲವೂ ಸರಿಯಾಗಿತ್ತು(?) ಸುಂದರ ಸ್ವಪ್ನದಂತೆ, ಆ ಸಂಜೆಯವರೆಗೆ

ಅಥವಾ ಆ ನಂಬಿಕೆಯಲ್ಲಿಯೇ ಬೆಚ್ಚಗಿತ್ತು ನಮ್ಮ ಒಡನಾಟದ ನಗೆ

ಹೌದು ಆವತ್ತು ಆ ಗೋಧೂಳಿ ಸಮಯದಂದು;

ನಿನಗೆ ಬೇಕಾಗಿತ್ತು ಸಾಂತ್ವನದ ಹೆಗಲು

ಎಲ್ಲವೂ ಬುಡಮೇಲು ನಾ ಕೈ ಕೊಸರಿಕೊಂಡು ಹೋಗಲು.

ಹೌದು ತಪ್ಪು ನನ್ನದೇ !

ನನ್ನ ಕಾರಣವದು ಸರಿಯಿತ್ತು ನನ್ನ ಸಮರ್ಥನೆಗೆ

ನಿನಗದು ಅರ್ಥವಾಗದೇ? ಯಾಕೆ ಈ ಅಸಮಾಧಾನದ ಹೊಗೆ?

ನನಗೆ ತಿಳಿದಿರಲಿಲ್ಲ ನಿನ್ನ ನೋವಿನ ಆಳವದು ಕಣ್ಣೀರಿನ ಸಾಗರವೆಂದು

ಆ ಸಾಗರದಲೆಗಳ ರಭಸದಲ್ಲಿ ನಿನಗೆ ತಿಳಿಯಲಿಲ್ಲ ನನ್ನ ಅಸಹಾಯಕತೆ ಏನೆಂದು

ಹೌದು ತಪ್ಪು ನನ್ನದೇ !

ನಾ ಮಾತು ಕೊಟ್ಟಿದ್ದೆನಲ್ಲವೇ- ಯಾವುತ್ತೂ ನಿನ್ನ ಕಷ್ಟಕ್ಕಿರುತ್ತೇನೆಂದು

ಮರೆತಿರಬಹುದು ನಾ ಅದನಂದು!

ಮಾರನೆಯ ದಿನ ಸಿಕ್ಕಿತ್ತು ನನಗೆ ಮರೆವಿನ ಮರುತ್ತರ

ಕೇಳದ ಪ್ರಶ್ನೆಗೆ ಬಯಸದ ಉತ್ತರ

ನೀ ಎದ್ದು ಹೊರಟು ನಡೆದೆ ಹೇಳದೇ-ಕೇಳದೇ

ನಾ ಕುಸಿದು ಬಿದ್ದೆ ಕಾರಣ ತಿಳಿಯದೇ

ಹೌದು ತಪ್ಪು ನನ್ನದೇ !

ಕಾರಣ ಕೇಳುತ್ತಿರುವೆನಲ್ಲ !, ನಾನೆಷ್ಟು ಹುಚ್ಚ

ನಿನ್ನ ಮರಳುವಿಕೆಗಾಗಿ ಕಾದಿರುವೆನಲ್ಲ; ತಪ್ಪು ನನ್ನದೇ !

Sunday, January 2, 2011

ಸರಿದು ಹೋದ ಹಿಂದಿನ ವರ್ಷದ ಸರಿ-ತಪ್ಪುಗಳನು

ಕಾಲವೆಂಬ ಕತ್ತಲೆಯಲಿ ಮರೆಮಾಚಿ;

ಹದಿನಾರರ ಯೌವ್ವನದಂತೆ ಹದವಾಗಿರುವ ಹೊಸವರ್ಷಕ್ಕೆ,

ಹಸಿರಾದ ಮನಸು-ನವಿರಾದ ಕನಸುಗಳೊಂದಿಗೆ ಸವಿಯಾಗಿ ಬೆರೆಯಿರಿ.

ಸಂತೃಪ್ತಿಯ ಚಿಗುರಿನೊಂದಿಗೆ ಸಂತಸದ ವಸಂತ ಸಂಭ್ರ್ಮಮ ನಿಮ್ಮದಾಗಲಿ.

ಹೊಸ ವರ್ಷವು ನಿಮಗೆಲ್ಲ ಹಳೆತನದ ಹಾದಿಯಲಿ ಹೊಸತನದ ಹೂವಾಗಲಿ.