Friday, December 4, 2020

 ಗೆಳತಿ,

ಗುಡ್ಡ ಬೆಟ್ಟಗಳ ಸುತ್ತಬೇಕು ನಿನ್ನಜೊತೆ,

ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ಗಂಭೀರವಾಗಿ ಸಮಾಲೋಚಿಸುತ್ತ

ಸವೆದ ಹಾದಿ - ಕಳೆದ(ಪಡೆದ) ಸಮಯ, ಎರಡೂ ನೆನಪಿರದಂತೆ.

ಜೀವನವೂ ಹಾಗೇ ಅಲ್ಲವೇ ಹುಡುಗಿ,

ಎಲ್ಲರಿಗೂ ಬೇಕಿರುವ- ಯಾರೂ ನೆನಪಿಡದ

ಮೈಲುಗಲ್ಲುಗಳ ಸರಮಾಲೆ.

ಬಿಸಿಲು ನೆತ್ತಿಗೇರಿದೆ ಬೆಡಗಿ,

ಬೆಟ್ಟದ ತುದಿ ತಲುಪುವರೆಗೂ ಜಗಳವಾಡಬೇಕು,

ಮೇಲೆ ಮುಸ್ಸಂಜೆ ಮಬ್ಬಲ್ಲಿ, ಮಾತಿಲ್ಲದೆ ಮೈಮರೆಯಬೇಕು ಸೂರ್ಯ ಮರೆಯಾಗುವರೆಗೂ

ಆ ಚುಮುಚುಮು ಚಳಿಯ ಮುಂಜಾವಿನಲಿ , ಬಿಗಿದಪ್ಪಿ ಮುತ್ತಾಡುವ ಆಸೆ ನನದಲ್ಲ ಗೆಳತಿ,

ಸುಮ್ಮನೆ ಆನಿಸು ನನ್ನೆದೆಯ ಮೇಲೆ, ಹುಲ್ಲು ಹಾಸಿನ  ಮೇಲೆ ಕೂತ ಇಬ್ಬನಿಯಂತೆ. ಹಾ, ಇಬ್ಬನಿಯಂತೆ ! ಸ್ವಲ್ಪ ಸಮಯ ಮಾತ್ರ !

ಜೀವನದ ದಿನ ದೊಡ್ಡದಿದೆ ಗೆಳತಿ, ಸಾಂಸಾರಿಕ ಸಂಗತಿಗಳ ನೋಡಬೇಡವೆ?

ಅಯ್ಯೋ, ನೀನೇನು ಹೆದರಬೇಡ ಮಾರಾಯ್ತಿ,

ಹಾಲು ಕಾಯಿಸಿ ಕಾಫಿ ಮಾಡಿದರೆ ಸರಿ

ಬೆಳಿಗ್ಗೆಯ ತಿಂಡಿ ನನ್ನ ಜವಾಬ್ದಾರಿ

ಸೂರ್ಯ ಸಿಟ್ಟಾಗಿ ಸುಡುವದರೊಳಗೆ ಕೆಳಗಿಳಿದು ಬಿಡಬೇಕು

ಜನ ಜಂಗುಳಿಯ ಬಜಾರಿನಲಿ ಕಳೆದು ಹೋಗೋಣ,

ನಾಳೆ ಮತ್ತೊಂದು ದಿನ, ಮಗದೊಂದು ಬೆಟ್ಟ - ಇವತ್ತಿಗಿಷ್ಟು ಸಾಕು

No comments:

Post a Comment