page #2
ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅಲ್ಪ ಅಂಶಗಳು:
ಅ) ಅಧ್ಯಕ್ಷರ ಆಯ್ಕೆ:
ಸಮ್ಮೇಳನದ ಕಾರ್ಯಭಾರದ ಮುಖ್ಂಡತ್ವವನ್ನು ಸಮ್ಮೇಳನಾಧ್ಯಕ್ಷರ ಕೈಗೆ ಕೊಡಲಾಗಿರುತ್ತದೆ. ಸಮ್ಮೇಳನದ ಅಧ್ಯಕ್ಷರಾಗುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸಮ್ಮೇಳನಾಧ್ಯಕ್ಷರನ್ನು ಅವರ ಸಾಹಿತ್ಯ ಸಂಶೋಧನೆ, ಕನ್ನಡ ಸೇವೆ,ಶಿಕ್ಷಣ ಸಾಧನೆ, ಜೀವನ ಶೈಲಿಯ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ. ಅವರ ಜೀವನ ಸಾಧನೆಗಳು ಅವರನ್ನು ಆ ಸ್ಥಾನಕ್ಕೆ ಕರೆದೊಯ್ಯುತ್ತವೆ. ಇದಕ್ಕೆ ಲಿಂಗ ಭೇಧ,ಜಾತಿ ಭೇಧ,ಐಶ್ವರ್ಯ ಭೇಧವಿಲ್ಲ.
ಆ)ಸಮ್ಮೇಳನದ ರೂಪು-ರೇಷೆ:
ನಾಡಿನ ಸಂಪ್ರದಾಯದಂತೆ ಧ್ವಜಾರೋಹಣದೊಂದಿಗೆ ಸಮ್ಮೇಳನದ ಹಸಿರು ನಿಶಾನೆ ಹೊರದೊರುತ್ತದೆ. ಸಂಪ್ರದಾಯಿಕ ಸಾಮಾನ್ಯ ಕಾರ್ಯಕ್ರಮಗಳು ಮುಗಿದ ನಂತರ ಸ್ಮರಣ ಸಂಚಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ- ಗ್ರಂಥ ಬಿಡುಗಡೆಗಳು ಜರುಗುತ್ತವೆ. ನಂತರದ ಮೂರ್-ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಹತ್ತು ಹಲವು ಗೋಷ್ಟಿಗಳು, ವಿಚಾರ-ವಿನಿಮಯಗಳು ನಡೆಯುತ್ತವೆ. ಕೊನೆಗೆ ಸಾಂಪ್ರದಾಯಿಕ ಸಮಾರೋಪ ಸಮಾರಂಭ ನೆರವೇರುತ್ತದೆ.
ಇ)ಕನಿಷ್ಠ ಕಾರ್ಯಶೈಲಿ ಹಾಗು ಸಮ್ಮೇಳನದ ಪ್ರಭಾವ:
ಇಲ್ಲಿ ಹಲವು ಗೋಷ್ಠಿಗಳ ಮೂಲಕ ಕನ್ನಡದ ಸಾಹಿತಿಗಳು, ಸಾಹಿತ್ಯ ಕಾರ್ಯಗಳು, ಕನ್ನಡದ ಸದ್ಯದ ಸ್ಥಿತಿ-ಗತಿ, ಸವಾಲುಗಳ ದೀರ್ಘ ಚರ್ಚೆಯಾಗುತ್ತದೆ. ಅನೇಕ ಸಾಹಿತಿಗಳು,ಚಿಂತಕರು ತಮ್ಮ-ತಮ್ಮ ವಿಚಾರಧಾರೆಯನ್ನು ವಾಚನಗಳ ಮೂಲಕ, ವಾದಗಳ ಮೂಲಕ ಮಂಡಿಸುತ್ತಾರೆ. ಕವಿ-ಲೇಖಕರು ತಮ್ಮ ಕವಿತೆಗಳನ್ನು ವಾಚಿಸುತ್ತಾರೆ. ಸಾಹಿತ್ಯದ ಸರ್ವರಂಗಗಳ ಪರಿಚಯ ಇಲ್ಲಿ ಕಾಣಸಿಗುತ್ತದೆ. ಕನ್ನಡ ನಾಡಿನ ಪಾರಂಪರಿಕ ನೃತ್ಯ, ಸಂಗೀತ, ಕುಂಚ ಮೊದಲಾದವುಗಳು ಸರಾಗವಾಗಿ ಸಾಗುತ್ತವೆ. ಸಮ್ಮೇಳನ ನಡೆದ ಸ್ಥಳ ಹಾಗೂ ಅದರ ಗತ ವೈಭವದ ಸಂಪೂರ್ಣ ಪರಿಚಯವಾಗುತ್ತದೆ. ಇತ್ತೀಚಿನ ಸಮ್ಮೇಳನಗಳಲ್ಲಿ ಕನ್ನಡದ ತಂತ್ರ ಕ್ಷೇತ್ರ ಪ್ರವೇಶ ಹಾಗೂ ಅಳವಡಿಕೆಯ ಬಗೆಗೆ, ಕನ್ನಡದ ಏಕೀಕರಣದ ಬಗೆಗೆ ವಾದ-ವಿವಾದಗಳು ಹೊರಬೀಳುತ್ತವೆ.
ಇದರಿಂದ ಕನ್ನಡಿಗರಲ್ಲಿ ಕನ್ನಡದ ಅರಿವು ಮೂಡುತ್ತದೆ. ಕನ್ನಡದ ಹಲವು ವೈಶಿಷ್ಟ್ಯಗಳ ಗೋಚರವಾಗುತ್ತದೆ. ಕನ್ನಡಿಗರಲ್ಲಿ ಕನ್ನಡದ ಮನೋಭಾವನೆ ಬೆಳೆಯುತ್ತದೆ. ಕನ್ನಡ ಸಾಹಿತ್ಯವನ್ನು ದೇಶಕ್ಕೆ, ಯುವ ಪೀಳಿಗೆಗೆ ಪರಿಚಯಿಸುವ ಒಂದು ಉತ್ತಮ ವೇದಿಕೆ ಇದಾಗಿದೆ.
ಈ ರೀತಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಏಳು-ಬೀಳಿನ ನಡುವೆ ಮುನ್ನಡೆಯುತ್ತಿವೆ. ಇದೇ ರೀತಿ ಸಮ್ಮೇಳನಗಳು ಜರುಗಲಿ, ಕನ್ನಡದ ಅಭಿವೃದ್ಧಿಯಾಗಿ ಕನ್ನಡ ಬೆಳೆಯಲಿ ಎಂದು ಆಶಿಸುತ್ತ(ವಿಶ್ವಾಸವಿಡುತ್ತ), ಕನ್ನಡದ ಕಾರ್ಯಕ್ಕೆ ಸದಾ ಕಂಕಣ ಬದ್ಧರಾಗಿರುತ್ತೇವೆಂದು ಕಿರುನುಡಿಯ ಕಾರುತ್ತ ಈ ಪೂರಕ ಬರಹಕ್ಕೆ ಅಂತಿಮ ಪರದೆಯನ್ನು ಹೆಣೆಯುತ್ತೇನೆ.
ಕನ್ನಡವನುಳಿದೆನಗೆ ಅನ್ಯಜೀವನವಿಲ್ಲ
ಕನ್ನಡವೇ ಎನ್ನುಸಿರು ಪೆತ್ತೆನ್ನ ತಾಯಿ
ಕನ್ನಡವೇ ಧನ-ಧಾನ್ಯ, ಕನ್ನಡವೇ ಮನೆ-ಮಾನ್ಯ
ಕನ್ನಡವೇ ಎನಗಾಯ್ತು ಕಣ್ಣು-ಕಿವಿ-ಬಾಯಿ ||
No comments:
Post a Comment