ಸಾಯುವ ತನಕ ಕಾಯಬೇಡ
ಇತ್ತ ಕತೆಯೂ ಅಲ್ಲದ-ಕವಿತೆಯೂ ಅಲ್ಲದ ಈ-ಮೇಲ್ ಒಂದಿದೆ.ಮನಸ್ಸಿಗೆ ಮುಟ್ಟುವಂತಿದೆ. ತನ್ನ ತಾಯಿಯ ಮಣ್ಣು ಕೊಟ್ಟು ಬಂದ ಮಗನೊಬ್ಬ ಬರೆಯುತ್ತನೆ ಅದನ್ನು. ಓದಿ ಮುಗಿಸಿದ ನಂತರ ವಿವರಿಸಲಾಗದ ಭಾವವೊಂದು ಮನಸ್ಸನ್ನಾವರಿಸಿಕೊಳ್ಳುತ್ತದೆ. ಅದು ತಾಯಿ ಬಗೆಗಿನ ಮರುಕವಾ? ಅವನ ಸ್ಥಾನದಲ್ಲಿ ನಮ್ಮನ್ನು ಗುರುತಿಸಿಕೊಂಡಾಗಿನ ಪಶ್ಚಾತಾಪವಾ?
ಹೀಗೆ ಸಾಗುತ್ತದೆ ಈ-ಮೇಲ್-
ಜಗತ್ತಿನ ತುಂಬ ಇರುವವರೆಲ್ಲ ನನ್ನಂತಹ ಮಕ್ಕಳೇ. ನನಗೊಬ್ಬಳು ಅದ್ಭುತವಾದ ತಾಯಿ ಇದ್ದಳು. ನಾನು ಹುಟ್ಟಿದಾಗಿನಿಂದ ಇಲ್ಲಿಯ ತನಕ ನಾನೇ ಅವಳ ಬದುಕಿನ ಕೇಂದ್ರವಾಗಿದ್ದೆ. ನನಗೆ ದುಃಖವಾದಾಗ ತಾನೂ ದುಃಖಪಟ್ಟಳು,ನನಗೆ ಸಂತೋಷವಾದಾಗ ತಾನೂ ಸಂತೋಷಪಟ್ಟಳು.ನಾನು ಕುಸಿದು ಕುಳಿತಾಗಲೆಲ್ಲ ಧೈರ್ಯ ಹೇಳಿದಳು.ನಾನು ಕ್ಲಾಸಿಗೆ ಮೊದಲಿಗನಾದೆ- ನನಗಿಂತ ಹೆಚ್ಚು ಆಕೆಯೇ ನಲಿದಳು. ನಾನು ಹನಿಮೂನ್ ಗೆ ಹೋದೆ-ಆಕೆ ಮನೆ ನೋಡಿಕೊಂಡಳು, ನಾವು ಗಂಡ-ಹೆಂಡತಿ ನೌಕರಿಗೆ ಹೋದರೆ ಮಕ್ಕಳನ್ನಾಡಿಸಿದಳು. ಆಕೆಯ ಮಡಿಲಲ್ಲೇ ದೊಡ್ಡವಾದವು ಮಕ್ಕಳು. ಅಂಥ ತಾಯಿ ಇವತ್ತು ತೀರಿಹೋದಳು. ಮಣ್ಣು ಕೊಟ್ಟು ಬಂದು, ಅವಳು ಮಲಗುತ್ತಿದ್ದ ಹಾಸಿಗೆ ತೆಗೆದಿಡುತ್ತಿದ್ದೆ. ಆಗ ದಿಂಬಿನ ಕೆಳಗೆ ಸಿಕ್ಕಿತು ಈ ಪತ್ರ. ಹೌದು, ಅಮ್ಮನೇ ಬರೆದಿದ್ದಳು. ನನಗೇ ಬರೆದಿದ್ದಳು, ಆದರೆ ಕೊಟ್ಟಿರಲಿಲ್ಲ. ಪತ್ರ ಓದಲು ಪ್ರಾರಂಭಿಸುತ್ತಿದ್ದಂತೆಯೇ ಕಣ್ಣು ಮಂಜಾದವು. ಅಕ್ಷರಗಳು ಮಸುಕು-ಮಸುಕು,
“ಮಗನೇ,
ಇನ್ನೇನು ಬಿದ್ದು ಹೋಗೋ ಮರ ಇದು. ನನ್ನನ್ನು ನೀನು ನಿಜವಾಗಲು ಇಷ್ಟಪಡೋದಾದರೆ, ನನ್ನ ಮೇಲೆ ಮಮಕಾರ ಇದ್ದರೆ ಅದೆಲ್ಲವನ್ನೂ ಈಗಲೇ ತೋರಿಸಿ ಬಿಡು. ನಾನು ಸಾಯುವ ತನಕ ಕಾಯಬೇಡ. ನನಗೆ ಗೊತ್ತು, ನಾನು ಸತ್ತಾಗ ನೀನು ತುಂಬಾ ಅಳ್ತೀಯಾ. ನನ್ನ ಶ್ರಾದ್ಧ ಮಾಡಿ ಬ್ರಾಹ್ಮಣರಿಗೆ ಹೊಟ್ಟೆ ತುಂಬಾ ಊಟ ಹಾಕ್ತೀಯಾ. ನನ್ನದೊಂದು ದೊಡ್ಡ ಫ಼ೋಟೋ, ಅದಕ್ಕೆ ಬಂಗಾರ ಬಣ್ಣದ ಫ಼್ರೇಮು,ಗಂಧದ ಮಾಲೆ ಹಾಕಿಸಿ ಬಂದವರೆಲ್ಲರಿಗೂ ಕಾಣಿಸುವಂತೆ ಗೋಡೆಗೆ ತೂಗು ಹಾಕ್ತೀಯಾ. ನನಗೊಂದು ದೊಡ್ಡ ಸಮಾಧಿ ಕಟ್ಟಿ ಅಮೃತ ಶಿಲೆಯ ಮೇಲೆ ನನ್ನ ಹೆಸರು ಕೆತ್ತಿಸಿ ಹಾಕ್ತೀ. ಬಂದವರೆಲ್ಲರೆದುರು ನನ್ನದೇ ಗುಣಗಾನ, ಅಮ್ಮ ಎಷ್ಟು ಒಳ್ಳೆಯವ್ಳು ಗೊತ್ತಾ?... ಏನುಪಯೋಗ ಮಗನೇ? ಅಷ್ಟೊತ್ತಿಗಾಗಲೇ ನಮ್ಮಿಬ್ಬರ ನಡುವೆ ಮರಣದ ಮಹಾ ಗೋಡೆ. ಅದಕ್ಕೇ ಹೇಳಿದ್ದು. ನನ್ನ ಮೇಲೆ ಪ್ರೀತಿ ಇದ್ದರೆ ಈಗಲೇ ತೋರಿಸಿಬಿಡು. ಸ್ವಲ್ಪಾನೇ ಆದರೂ ಪರವಾಗಿಲ್ಲ. ಸಾಯೋತನಕ ಖುಷಿ ಪಡಲು ನನಗೆ ಅದಕ್ಕಿಂತ ಹೆಚ್ಚಿಗೆ ಏನು ಬೇಕು? ಮಗನೇ, ದಯವಿಟ್ಟು ನಾನು ಸಾಯೋ ತನಕ ಕಾಯಬೇಡ”.
ಇಷ್ಟು ಓದುವುದರೊಳಗಾಗಿ ನನ್ನ ದುಃಖ ಉಮ್ಮಳಿಸಿ ಬಂದಿತ್ತು. ನಾನು ಅಮ್ಮನನ್ನು ತುಂಬ ಇಷ್ಟಪಡ್ತಿದ್ದೆ,ಆದರೆ ಯಾವತ್ತೂ ಹೇಳಿಕೊಳ್ಳಲಿಲ್ಲ. ಪ್ರೀತಿಯಿಂದ ಜೊತೆಗೆ ಕುಳಿತು ಮಾತನಾಡಲಿಲ್ಲ. ನಾವೆಲ್ಲರೂ ಸಿನಿಮಾಕ್ಕೆ ಹೋದ್ವಿ,ಆಕೇನಾ ಸಂಜೆ ಪಾರ್ಕಿಗೋ-ದೇವಸ್ಠಾನಕ್ಕೋ ಹೋಗಿ ಬಾ ಅಂದ್ವಿ. ಔಷಧಿ ಕೋಡೊದನ್ನೇ ಪ್ರೀತಿ ಅಂದುಕೊಂಡೆ ನಾನು. ಅಮ್ಮ ಹಾಸಿಗೆ ಹಿಡಿದಾಗ ನಾನ್ಯಾವತ್ತು ಹೋಗಿ ತಲೆ ಸವರಿ ಹೇಗಿದ್ದೀ ಅಂತ ಕೇಳಲಿಲ್ಲ. ಇವತ್ತು ಅಮ್ಮ ಇಲ್ಲ. ಆಕೆ ನನ್ನ ಪಾಲಿನ ಏನಾಗಿದ್ದಳು ಎಂಬುದನ್ನು ನಾನ್ಯಾವತ್ತು ಹೇಳಿಕೊಳ್ಳಲೇ ಇಲ್ಲ. ಜಗತ್ತಿನ ತುಂಬ ನನ್ನಂತಹ ಮಕ್ಕಳೇ. ಅಮ್ಮನ ಪ್ರೀತಿಯನ್ನ ತೋರಿಸಲು ಅವಳು ಸಾಯುವತನಕ ಕಾಯುವರು.
ಎಂಬಲ್ಲಿಗೆ ಮುಗಿಯುತ್ತದೆ ಕಥೆಯಂತ ಕವನ. ಎಷ್ಟು ಸತ್ಯ ಅಲ್ಲವಾ? ಆ ಅಮ್ಮ ತನ್ನ ಮಗನಿಗೆ ಬರೆದಿಟ್ಟ ಪತ್ರ ಜಗತ್ತಿನ ಅಷ್ಟೂ ಮಕ್ಕಳನ್ನುದ್ದೇಶಿಸಿ ಬರೆದದ್ದು ಮತ್ತು ಅಷ್ಟೂ ಅಮ್ಮಂದಿರ ಪರವಾಗಿ ಬರೆದದ್ದು ಅನ್ನಿಸುವದಿಲ್ಲವೇ? ಗಮನಿಸಿ ನೋಡಿ, ನಮ್ಮ ಬೇಕು-ಬೇಡಗಳು,ಊಟ,ವಿಸರ್ಜನೆಗಳನ್ನು ಸಂಭಾಳಿಸುತ್ತಲೇ ತನ್ನ ಇಷ್ಟ-ಕಷ್ಟಗಳನ್ನು ಮರೆತೇ ಬಿಟ್ಟೀರುತ್ತಾಳೆ. ಇಬ್ಬರು ಮಕ್ಕಳನ್ನು ಸಾಕಿ ಬೆಳೆಸಿ, ಓದಿಸಿ ದೊಡ್ಡವರನ್ನಾಗಿ ಮಾಡಿ, ಅವರನ್ನು ನೌಕರಿಗೆ ಹಚ್ಚುವದರಲ್ಲಿ ಮುಪ್ಪು ಕಂಡ ತಾಯಿಯನ್ನೊಮ್ಮೆ ನಿಲ್ಲಿಸಿ “ನಿಮ್ಮ ನೆಚ್ಚಿನ ಚಿತ್ರನಟ ಯಾರು? “ ಅಂತ ಕೇಳಿ ನೋಡಿ, ಗಾಬರಿಬಿದ್ದು ಹೋಗುತ್ತಾಳೆ. ಆಕೆ ತುಂಬ ಆಸೆ ಪಟ್ಟು ತನ್ನಿಷ್ಟದ ಸೀರೆ ಖರೀದಿಸಿ,ಅದಕ್ಕೊಂದು ಮ್ಯಾಚಿಂಗ್ ಬ್ಲೌಸು ಹೊಲೆಸಿಕೊಂಡು ಅದನ್ನು ತನ್ನ ಓರಗೆಯವರಿಗೆಲ್ಲ ತೋರಿಸಿ ಸಂಭ್ರಮಿಸಿ ತುಂಬ ಕಾಲವಾಗಿರುತ್ತದೆ. ನಮ್ಮ ಭವಿಷ್ಯ ಉಜ್ವಲವಾಗಿರಲೆಂದು ತಮ್ಮ ವರ್ತಮಾನವನ್ನು ಸುಟ್ಟುಕೊಳ್ಳುವ ಅಮ್ಮನ ಹಂಬಲ ಅದೊಂದೇ- ಹಿಡಿ ಪ್ರೀತಿ.
ದುರಂತವೆಂದರೆ, ಅಷ್ಟು ಪ್ರೀತಿಯಿಂದ ಸಾಕಿದ ಮಗ ತನ್ನ ಯಶಸ್ಸಿನ ಉತ್ತುಂಗವನ್ನು ತಲುಪುವುದರೊಳಗಾಗಿ ಅವಳ ಕೂದಲು ನೆರೆಯೊಡೆದಿರುತ್ತದೆ.ಮಗ ಯಶಸ್ಸಿನ ಕುದುರೆ ಏರಿ ರಣರಂಗದಲ್ಲಿ ಸಾಗುವುದನ್ನು ನೋಡುವ ಸೌಭಾಗ್ಯ ಕೆಲವೇ ತಾಯಂದಿರಿಗಿರುತ್ತದೆ.
ಅಂತ ಅಮ್ಮಂದಿರಲ್ಲಿ ನಮ್ಮ ಅಮ್ಮಳೂ ಒಬ್ಬಳಾಗಬೇಕು.
ಮೇ ೯ ರಂದು ತಾಯಂದಿರ ದಿನ. ನಾವು ಕೂಡ ಈ ಈ-ಮೇಲ್ ನಲ್ಲಿರುವ ಮಗನಂತಾಗಬಾರದು. ಕೇವಲ ಒಳ್ಳೆಯ ತಾಯಿಯ ಪಡೆದು ಉತ್ತಮ ನಾಗರಿಕನಾದರೆ ಸಾಲದು, ಉತ್ತಮ ಮಗನಾಗಬೇಕು. ತಾಯಿಯೇ ದೇವರು ಅಂತಾರೆ. ಆದರೆ ಅವಳು ಬಯಸುವುದು ಪೂಜೆಯನ್ನಲ್ಲ. ಪ್ರೀತಿಯ ಒಂದೆರಡು ಮಾತುಗಳನ್ನ. ಆತ್ಮೀಯವಾದ ಕೆಲವು ಕ್ಷಣಗಳನ್ನ. ತಾಯಿಗೊಸ್ಕರ ಪ್ರಾಣ ಕೊಡ್ತಿನಿ ಅಂತ ಹೇಳಬೇಕಾಗಿಲ್ಲ. ಯಾಕೆಂದರೆ ಯಾವ ತಾಯಿಯೂ ಅವಳ ಮಕ್ಕಳ ಪ್ರಾಣ ಕೇಳೊಲ್ಲಾ. ಕೇಳೊದು ಕೇವಲ ನಿಮ್ಮ ಸಂತೋಷ ಜೊತೆಗೆ ಒಂದಿಷ್ಟು ಋಣಾನುಭಾವ. ನಾವು ತಾಯಿಗೆ ಗೌರವ ತೋರಿಸುವ ಮೊದಲು ಪ್ರೀತಿ ತೋರಿಸೊದು ಮುಖ್ಯ ಅಲ್ಲವೇ?
No comments:
Post a Comment