ಮುನ್ನುಡಿ –ಜ್ಞಾನಕ್ಕೆ ಹಿಡಿದ ಕನ್ನಡಿ:
ಹೆಸರು ಸೂಚಿಸುವಂತೆ ಇದೊಂದು ಕನ್ನಡ ಸಾಹಿತ್ಯ ಕೃಷಿಯ ಸುವ್ಯವಸ್ತಿತವಾದ ಸಮ್ಮೇಳನವಾಗಿದೆ. ’ಕನ್ನಡಿಗರ ಹಬ್ಬ’ ವೆಂದೆ ಪ್ರಸಿದ್ಧಿಯಾದ ಕನ್ನಡ ಸಾಹಿತ್ಯ ಸಮ್ಮೇಳನ ನಿಜಕ್ಕೂ ಕಾವ್ಯ-ಕೃತಿಗಳ ಜಾತ್ರೆಯೇ ಸರಿ. ಕನ್ನಡದ ಸರ್ವರಂಗಗಳ ಸುಗಮವಾದ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನೇರ ನಿಟ್ಟಿನಿಂದ ಸಹಕಾರಿಯಾಗಿದೆ. ಸಮ್ಮೇಳನದಲ್ಲಿ ಕೇವಲ ಸಾಹಿತ್ಯವಷ್ಟೇ ಅಲ್ಲದೆ ಕನ್ನಡ ನಾಡಿನ ಹಲವು ಸಂಸ್ಕೃತಿಗಳ ಮೇಳವೇ ಜರುಗುತ್ತದೆ.
ಸಮ್ಮೇಳನಗಳು ’ಕನ್ನಡ ಸಾಹಿತ್ಯ ಪರಿಷತ್’ನ ನೇತೃತ್ವದಲ್ಲಿ ಸೂಚಿಸಿದ ಅಧ್ಯಕ್ಷರುಗಳ ಮಾರ್ಗದರ್ಶನದಲ್ಲಿ ನೆರವೇರುತ್ತದೆ. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾದುದು ೧೯೧೫ ಮೇ ೩ರಂದು, ಬೆಂಗಳೂರಿನಲ್ಲಿ. ಪ್ರಥಮ ಸಮ್ಮೇಳನಾಧ್ಯಕ್ಷರು ಎಚ್.ವಿ.ನಂಜುಂಡಯ್ಯ, ಕನ್ನಡ ಸಾಹಿತ್ಯ ಪರಿಷತ್ ನ ಸಂಸ್ಥಾಪಕರಲ್ಲಿ ಒಬ್ಬರು. ಈ ರೀತಿ ಆರಂಭಗೊಂಡು, ಕನ್ನಡದ ಸರ್ವರಂಗ ಬೆಳವಣಿಗೆಗೆ ಸಹಾಯ ಹಸ್ತ ತೋರುತ್ತ ಯಶಸ್ವಿಯಾಗಿ ನಡೆದುಕೊಂಡು ಬಂದಿವೆ.
ಮೊದ-ಮೊದಲಿಗೆ ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿದ್ದ ಚರ್ಚೆಗಳು, ಇಂದು ತಂತ್ರಜ್ಞಾನದ ಬಗೆಗೂ ಚಿತ್ತ ಬೀರಿವೆ. ಆದರೆ ಅಂದಿನ ಆ ವೈಭವ, ಜನ-ಜಾತ್ರೆ ಇಂದು ಕಳೆಗುಂದುತ್ತಿದೆ. ಶತಪ್ರಯತ್ನದ ಮಧ್ಯವೂ ಯಾವುದಾದರೂ ಒಂದು ಕೊರತೆ ಕನ್ನಡಿಗರನ್ನು ಕೊರೆಯುತ್ತಲೇ ಇದೆ. ಇತ್ತೀಚೆಗೆ ಸಮ್ಮೇಳನಗಳೂ ಕೂಡ ರಾಜಕೀಯದ ಪಾಪ ಪಾಶಕ್ಕೆ ಸಿಲುಕಿ ಜನರ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ಈ ನಷ್ಟವನ್ನು ಭರಿಸಲು ಕನ್ನಡಿಗರೆಲ್ಲರೂ ಸ್ವ-ಕಾಳಜಿಯಿಂದ ಪ್ರಯತ್ನಿಸಬೇಕಾಗಿದೆ. ಕರ್ನಾಟಕದ ಕೇತನವನ್ನು ಎಲ್ಲೆಡೆ ಹಾರಿಸಿ, ಕನ್ನಡ ಡಿಂಡಿಮವ ಬಾರಿಸಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಗಬೇಕಿದೆ. ಆದ್ದರಿಂದ ಕನ್ನಡದ ಈ ಸಮ್ಮಿಲನದ ಮೇಳಕ್ಕೆ ಪೂರಕವಾಗಿ, ಅದರ ಅಲ್ಪ ಅರಿವನ್ನು ಕೊಡುವ ಪ್ರಯತ್ನ ಇಲ್ಲಿದೆ.
No comments:
Post a Comment