ಮೌನದರಮನೆಯಲಿ ಮನಸಿನ ಮಾತಿಗೆ
ಶಬ್ದಗಳಲಿ ಉತ್ತರ ಹುಡುಕಿದಂತೆ
ಜೀವನದ ಜಾತ್ರೆಯಲಿ, ಭಯವೇ ಬೆಚ್ಚಿಬೀಳುವಂಥ ಬೂಟಾಟಿಕೆ-
ಆಡಂಬರದ ಕಿರುಚಾಟ,
ಒಳಗೊಳಗೆ ಮೂಕ ಮನಗಳ ಮೌನ ಮಾತಿನ ಹುಡುಕಾಟ |
ಕಣ್ಣೀರ ಕಣ್ಗಳಲಿ ಸಂತೋಷದ ತೊಳಲಾಟ
ಮನದ ಮೂಲೆಯಲಿ ಕಂಬನಿಯ ನೀರಾಟ |
ಬೆಳಕಿನ ಬುಗ್ಗೆಯಲಿ ಹೊಳಪಿನ ಅಲೆದಾಟ
ಬರೀ ಹುಲಿಗಳ ನಾಡಿನಲಿ ಹೊಟ್ಟೆಗಾಗಿ ಹೋರಾಟ |
ಅಕ್ಷರಗಳ ಜೋಡಣೆಯಲಿ ಅರ್ಥಗಳ ಅನ್ವೇಷಣೆ
ಸತ್ವವಿರದ ಶಬ್ದಗಳ ಸುಂದರ ಸಂಭಾಷಣೆ |
ಯಾರು ಯಾರಿಗೆ ಮಿತ್ರರಿಲ್ಲಿ, ಯಾರು ಶತ್ರುಗಳೋ?
ಜಡ-ಜೀವಗಳ ಕಾದಾಟದ ನಡುವೆ ಗೆಲುವುದಾರ ಬಲಗಳೋ?
ಜೀವಂತ ಕಣ್ಣುಗಳೂ ಸಹ ಮೋಸದ ಕವಡೆಗಳು
ಪ್ರತೀ ಹುಡುಕಾಟದಲ್ಲೂ ಹೊಸತರದ ಭಾವಗಳು ;
ಜಡವಂತೂ ಮೊದಲೇ ನಿರ್ಜೀವ !
ಹುಡುಕಾಟದ ಈ ಹಾದಿಗೆ ಯಾವತ್ತು ಕೊನೆ,
ಎಲ್ಲಿರುವುದು ಉತ್ತರಗಳ ಮಹಾಮನೆ?
ನೂರಾರು ಉತ್ತರಗಳು ; ಯಾವುದೆಂದು ಆರಿಸುವುದು ?
ಸಾವಿರಾರು ಪ್ರಶ್ನೆಗಳು ; ಸತ್ತಷ್ಟೂ ಹುಟ್ಟುವುದು !
ಹುಡುಕಿದಷ್ಟೂ-ದೊರಕಿದಷ್ಟೂ ಹೆಚ್ಚಾಗುವುದು ರಹಸ್ಯ
ಅದುವೇ ಜೀವನದ ಬಲು ದೊಡ್ಡ ಹಾಸ್ಯ
No comments:
Post a Comment