ಹೊಯ್ದಾಟ
ಕೆಲವರು ಹೇಳ್ತಾರೆ-
ಕೆಲಸ ಮಾಡು ಪ್ರತಿಫಲ ಬಯಸಬೇಡ
ಅದೇ ಕೆಲವರು ಬೇಡುತ್ತಾರೆ-
ಕಾರ್ಯಸಾಧನೆಗೆ ತುಂಬಿರಬೇಕು ಪ್ರೋತ್ಸಾಹದ ಕೊಡ
ಎಂಥ ಆಶ್ಚರ್ಯ, ಅಣುಕು!
ನಾವೆಲ್ಲ ಬಯಸುವ ಪ್ರತಿಫಲ ಪ್ರೋತ್ಸಾಹವೇ ಅಲ್ಲವೇ?!
ಪ್ರತಿಫಲಕ್ಕೆ ಏನೂ ಬೆಲೆಯೇ ಇಲ್ಲವೇ?
ಅಷ್ಟಕ್ಕೂ ಪ್ರೋತ್ಸಾಹ ಎಂದರೇನು?
ಪ್ರಯತ್ನಕ್ಕೆ ಸಿಕ್ಕ ಗೆಲುವೇ? ಅಥವಾ
ಮನಸ್ಸಿಗೆ ಸಿಗುವ ಸಮಾಧಾನವೇ?
ನಾಲ್ಕಾರು ಮಂದಿ ಹೊಗಳಿ ಹೊನ್ನ ಶೂಲಕ್ಕೇರಿಸಿದರೆ
ಅದು ಪ್ರೋತ್ಸಾಹವಾದೀತೆ? ಮರುಕದಂತೆ ಕಾಣದೇ ಅದು?!
ಪ್ರಯತ್ನದ ಬಳಲಿಕೆ ತಣಿಯಲು ದೊರಕುವ
ಜೀವನಾಧಾರವೇ ನಿಜವಾದ ಪ್ರೋತ್ಸಾಹವಲ್ಲವೇ?
ಜೀವನಾಧಾರ ಕೊಡದ ಪ್ರಯತ್ನ ವ್ಯರ್ಥವಲ್ಲವೇ?
ಅಥವಾ ಆ ಪ್ರಯತ್ನದ ದಿಕ್ಕು ಸರಿಯಿಲ್ಲವೇ?
ಅಷ್ಟಕ್ಕೂ ದಿಕ್ಕು ನಿಶ್ಚಿತವೇ? ; ಇಲ್ಲಾ ನಮ್ಮ ಕಲ್ಪನೆಯೇ?
ಮೊದಮೊದಲು ಬಯಸದ ಪ್ರತಿಫಲ ಈಗ
ಬೇಡಿದ್ದೇ ತಪ್ಪೇ? ; ತುಂಬಾ ತಡವಾಯಿತೇ?
ಗೊತ್ತಿಲ್ಲಾ!!
ಮನಸ್ಸು ಈ ಎರಡು ದಿಕ್ಕುಗಳ ನಡುವೆ ಅಲೆಮಾರಿ
ಯಾಕೋ ಸಿಗುತ್ತಿಲ್ಲ ಸರಳ ದಾರಿ.
ಎರಡು ದೋಣಿಯ ಪಯಣ, ಸುಖವಲ್ಲ
ನನಗೂ ಗೊತ್ತು!
ಆದರೂ, ನನ್ನ ಮನಸ್ಸು- ನನ್ನದಲ್ಲದ ಸ್ವತ್ತು!!?
ಮನಸ್ಸು-ಮೆದುಳು
ಯಾವಾಗಲೂ ಹೀಗೆ ವೈರಿಗಳೇ?
ವೈರಿಗಳಲ್ಲೂ ವಿರೋಧವೆನ್ನುವುದು ಸಮಾನ ಅಂಶವಲ್ಲವೇ?
ದಿಕ್ಕುಗಳು ನಿಶ್ಚಿತವಾದರೆ ಸಮಾನ ಅಂಶ ಅಸಮವೇ?!
ಅಥವಾ ದಿಕ್ಕುಗಳು ಸಂಧಿಸುವವೇ ಮುಂದೊಂದು ದಿನ?
ಗೊತ್ತಿಲ್ಲಾ!!
ಕಾಲದ ಹರಿವಲ್ಲಿ ಉತ್ತರ ಸಿಗುವುದೋ !
ಅದೂ ತಿಳಿದಿಲ್ಲಾ.
ತಿಳಿದಿರುವುದೊಂದೆ-
ದಿಕ್ಕು ನಿಶ್ಚಿತವೆಂದು ಒಪ್ಪುವ ದೃಢ ಸಂಕಲ್ಪ
ನಿನ್ನಲ್ಲಿದ್ದರೆ, ಆರಿಸಿಕೊ ಎರಡರಲ್ಲೊಂದನ್ನು
ಇಲ್ಲವೋ; ಮನಸ್ಸು ಮರುಳು ಎನ್ನುತ್ತಾರೆ
ಪುಸಲಾಯಿಸು !- ದಿಕ್ಕುಗಳು ಸೇರುತ್ತವೆಂದು
ಅದರ ಹೊಯ್ದಾಟದ ಅಲೆಗಳಲ್ಲಿ
ಪ್ರಯತ್ನದ ಪಯಣ ಸಾಗುತ್ತಿರಲಿ
ಅಷ್ಟಕ್ಕೂ ಪ್ರಯತ್ನ ಎಂದರೇನು ?!?!?!?!?!?
No comments:
Post a Comment