Friday, December 4, 2020

ಪರದೇಶ

 ಭುವಿಗೆ ತಂಪೆರದು ಮನಸಿಗೆ ಮುದ ನೀಡುವ ಸೋನೆಮಳೆ , 

ಕೋಪದಲಿ ರಪರಪನೆ ರಾಚುತ್ತಿದೆ |

ನಿತ್ಯ ಜೀವನದ ಗಂಟೆ ಜಾಗಟೆಗಳೆಲ್ಲ ಮಾತು ಕಳೆದು ಮೌನವಾಗಿವೆ, ಜೀವಂತಿಕೆಯ ಸದ್ದಿಲ್ಲದೆ 

ಬಣ್ಣ ಬಣ್ಣದ ಎಲೆ ಮರಗಳ ನಡುವೆ ಮಾಸಿ ಹೋದ ಮನಸುಗಳು,

ವೈಯ್ಯಕ್ತಿಕ ಸಮಯಕ್ಕೂ ವೇಳಾಪಟ್ಟಿ, ಸದ್ದಿಲ್ಲದೆ ಸತ್ತಿವೆ ಕನಸುಗಳು

ಎಚ್ಚರಿಕೆ ! ಸ್ವಚ್ಛ ಗಾಳಿಯಿದೆ ಇಲ್ಲಿ , ಉಸಿರುಗಟ್ಟುವ ವಾತಾವರಣ

Saturday, February 23, 2019

ರಂಗು ರಂಗಿನ ಬಣ್ಣದುಡುಗೆ
ರಾಜ ಗಾಂಭೀರ್ಯ ನಡಿಗೆ
ಊರಲ್ಲೆಲ್ಲ ವಿಜಯೋತ್ಸವದ ಮೆರವಣಿಗೆ;
ಸವಾರಿ ಹೊರಟಿದೆ ಬನ್ನಿ ಮಂಟಪದ ಕಡೆಗೆ
ಕಣ್ಣಲ್ಲಿ ನೆಟ್ಟ ನೋಟ ಕೆನ್ನೆ ಮೇಲಿಂದ ಜಾರಿ
ಮೊಲೆಯ ತುದಿಯೇರಿ ಕುಳಿತಿದೆ !

ಸ್ವಲ್ಪೇ ಸ್ವಲ್ಪ ನಗು, ಆ ಮತ್ತಿನಲೇ ಮೇಲೇರಿ ಬರಬಹುದು,
ತುಟಿಯಂಚಿನೆಡೆಗೆ 

Saturday, July 7, 2018

ಮೋಡ ಕವಿದ ವಾತಾವರಣ,
ಸದಾ ಹಸನ್ಮುಖಿ ಗಾಳಿಗೂ ನಗುವಿಲ್ಲ
ಒಂದು ಪೋಲಿ ಜೋಕಾದರು ಹೇಳು, ನಾಚಿ ನೀರಾಗಲಿ;

Saturday, February 17, 2018

ಅಂಕು ಡೊಂಕಾದ ಹಾದಿಯಲಿ,
ಮಳೆಗಾಲದಲ್ಲೊಂದು ತೊರೆ ಹುಟ್ಟಿ,
ಹರಿವ ನೀರಿಗೆ ಕಲ್ಲು ಮಣ್ಣಿನ ಒಡ್ಡು ಕಟ್ಟಿ,
ಹಳೆಯ ಪುಸ್ತಕದ ಹಾಳೆಯಲಿ ಹಡಗು ಮಾಡಿ - ಅದೂ ಗಂಡು ಹೆಣ್ಣಿನ ಜೋಡಿ !
ಅರ್ಧ ಮುಳುಗಿದ ಹಡಗಿಗೆ ಹೊರಲಾರದ ಭಾರ ಹೊರಿಸಿ
ಯಾವ ಸಮುದ್ರ ಯಾನಕ್ಕೂ ಕಡಿಮೆಯಲ್ಲ ನಮ್ಮ ಸಾಧನೆ

ಕಟ್ಟಿದ ಒಡ್ಡಿಗೊಂದು ಕಳ್ಳಗಿಂಡಿಯ ಕೊರೆದು,
ನೀರು ಹರಿಯಲೊಂದು ಕಾಲುವೆ, ಅಲ್ಲಲ್ಲಿ ಕವಲೊಡೆದ ಹರಿವಿನಿಂದಾದ ನಡುಗಡ್ಡೆ
ಬುಡ ಸಮೇತ ಕಿತ್ತು ತಂದು ನೆಟ್ಟ ಗಿಡಗಳು ನಡುಗಡ್ಡೆಯ ನೆತ್ತಿಯ ಮೇಲೆ !
ವ್ಯವಸಾಯ, ವ್ಯಾಪಾರ, ಮನೆ ಮಡದಿ ಮಕ್ಕಳು ;
ದಿನಕ್ಕೊಂದು ನಾಗರಿಕತೆಯ ಹುಟ್ಟು, 
ಈ ಬೇಡದ ದುಡ್ಡಿಗಾಗಿ, ಬೇಕಾಬಿಟ್ಟಿ ಖರ್ಚಾಗಿದೆ ಜೀವನ
ಚಿಂತೆ ಹತ್ತಿದೆ ನನಗೆ ಏನು ಮಾಡುವುದು ಇಷ್ಟೆಲ್ಲ ಹಣವನ್ನ,
ತಿರುಗಿ-ತಿಂದು-ತೆಗಿ ಹೊಟ್ಟೆ ಬಿರಿದೂ ಹೆಚ್ಚಾಗಿದೆ !

ಇಲ್ಲ ಸಲ್ಲದ ಆಸೆಗಳ ಕಿಡಿ ಹೊತ್ತಿಸಿ, ಕಿಡಿ ಕಾಳ್ಗಿಚ್ಚಾಗಿ ಕೆರಳಿದೆ
ಆರಿಸಲು ಬೇಕಾದ ನೀರಿಗೆ ಹಣ ಸಾಲದು ! ಮತ್ತೆ ದುಡಿಯಬೇಕು ಕತ್ತೆಯಂತೆ
ನೂರು ಸಹಸ್ರ ದೀಪಗಳ ಬೆಳಗುವುದಲ್ಲ ದೀಪಾವಳಿ,
ಹೊಗೆಯೆಬ್ಬಿಸಿ ಕೆಮ್ಮಿ ಕಿರಿಚಾಡುವುದಲ್ಲ ದೀಪಾವಳಿ,
ಹಚ್ಚಬೇಕಿರುವುದು ಒಂದೇ ಹಣತೆ !
ಬದುಕಿನ ಬತ್ತಿಯ ಸ್ನೇಹ ಪ್ರೀತಿಯಲಿ ಅದ್ದಿ,
ಜೀವನಾಸಕ್ತಿಯ ಕಿಡಿಯನು ಹಚ್ಚಿ,
ಬೇಡದ-ಬಿಡದ ಬೀರುಗಾಳಿಯ ಮೆಟ್ಟಿ ನಿಲ್ಲುವ
ಬಣ್ಣದ ಬೆಳಕಿನ ಪುಟ್ಟ ಹಣತೆ