Saturday, February 17, 2018

ಹೊಸ್ತಿಲ ಹೊರಗೆ ನಿಂತು ನೋಡುವುದೇ ಚೆಂದ, ಒಳಗೆ ಬರಲೆಕೋ ಹಿಂಜರಿಕೆ
ನೀನೇ ಬಂದು ಬಿಡು ಓ ಗೆಳತಿ, ನನ್ನದು ತೆರೆದ ಬಾಗಿಲ ಮನೆ
ಮೊಡಗಳಿಗೇನೋ ಜಡತ್ವ,
ನಿಂತಲ್ಲೇ ನಿಂತಿವೆ ಗರ ಬಡಿದಂತೆ

ಗಾಳಿಗೂ ಉಸಿರಾಟದ ತೊಂದರೆ,
ವರುಣನಿಗೆ ವನವಾಸ,
ಕೇಳುವವರಾರಿಲ್ಲ ಬಾಯ್ಬಿರಿದು ನಿಂತ ಭೂಮಿಯ ಚಿಂತೆ
ಸನ್ಯಾಸಿಯಾಗಬೇಕಿದೆ ನನಗೆ,
ವೈರಾಗ್ಯವ ತೊರೆದು ಸನ್ಯಾಸಿಯಾಗಬೇಕಿದೆ !

ಸನ್ಯಾಸಿಯಾಗಬೇಕಿದೆ ನನಗೆ,
ಏಕಾಂತಕೆ ಅಂತ್ಯ ಹಾಡಿ ಸನ್ಯಾಸಿಯಾಗಬೇಕಿದೆ !

ಬದುಕಿನ ಶೂನ್ಯತೆಯಲಿ ಅನಂತತೆಯ ಹುಡುಕಿ,
ಮೋಕ್ಷದ ಮೇಲಿನ ಮೋಹವ ಹೊಸಕಿ,
ಸನ್ಯಾಸಿಯಾಗಬೇಕಿದೆ ನನಗೆ !
ಪ್ರಿಯಕರನ ತುಂಟಾಟಕೆ ನಾಚಿ ನೀರಾದ ನೀರೆಯರೆಷ್ಟೋ,
ಮುಸ್ಸಂಜೆ ಸಮಯದಲಿ ಆಕಾಶ ಕೆಂಪೇರಿದೆ !

ಗಾಳಿಯ ದಾಳಿಗೆ ಮೊಡಗಳೆಲ್ಲ ಗುಳೆ ಹೊರಡಿವೆ,
ದುಃಖ ದುಮ್ಮಾನಗಳ ಭಾರಕೆ, ಕಣ್ಣೀರ ಮಳೆ ಸುರಿದಿದೆ
ಹಳೆ ವರ್ಷದ ಬೇರು ಭದ್ರವಾಗಿರಲಿ-ಹೊಸ ವರ್ಷದ ಚಿಗುರು ಕುಡಿಯೊಡೆಯಲಿ,
ದುಃಖ-ದುಮ್ಮಾನಗಳೆಲ್ಲ ತರಗೆಲೆಗಳಂತೆ ಉದುರಲಿ-
ಸಂತಸದ ಹೂವರಳಿ ನಗಲಿ |
ಶ್ರಮ-ಪರಿಶ್ರಮದ ಕಾಯಿಯದು ಯಶಸ್ಸಿನ ಹಣ್ಣಾಗಲಿ-
ನವಿರಾದ ತಂಗಾಳಿ ನೆಮ್ಮದಿಯ ಉಸಿರಾಗಲಿ |

ಹೊಸ ವರ್ಷ ಎಲ್ಲರಿಗು ಹಳೆತನ್ನು ಮರೆಸದಿರಲಿ-
ನವ ಚೈತನ್ಯವ ಹೊತ್ತು ತರಲಿ
ಮಳೆ ಹುಯ್ಯುವ ಈ ಸಮಯದಲಿ,
ಒಂಟಿತನದಿ ಮನ ಒಣಗಿ ನಿಂತಿದೆ

ಬೊಗಸೆ ಹಿಡಿದ ಸೋನೆ ಮುತ್ತೆಲ್ಲ ಬೆರಳ ಸಂದಿಯಲಿ ಸೋರಿ ಹರಿದಿದೆ

ಕಣ್ಣ ಮಿಂಚು ಕಾಣದಾಗಿ, ಬರೀ ಗುಡುಗು ಸಿಡಿಲಿನ ಕಿರುಚಾಟ,
ರಾತ್ರಿಯೆಲ್ಲ ರಪ ರಪ ರಾಚುವ ವರುಣನಾರ್ಭಟ ,
ಬಾರದ ನಿದ್ರೆಗೆ ಬದುಕೆಲ್ಲ ಹುಡುಕಾಟ

Monday, December 19, 2016

ಹುಡುಕಾಟ

ಮಲೆಗಳಲಿ ಮದುಮಗಳ ಅರಸಿ ಬಂದವ ನಾನು, ಮನ ಗೆದ್ದವಳು ಮಾತ್ರ ಕಾನೂರು ಹೆಗ್ಗಡತಿ |
ಸಂಗ್ಯ-ಬಾಳ್ಯರ ಹುಚ್ಚೆದ್ದು ಹುಡುಕುವಾಗ, ಗಕ್ಕನೆ ಕಂಡದ್ದು ಸಿಂಗಾರವ್ವನ ಅರಮನೆಯ ಒಡತಿ|
ಘಟಶ್ರಾಧ್ಧದಲಿ ಕಂಡ ನಾಟಕೀಯತೆ ಅರ್ಥವಾದದ್ದು ಸಂಸ್ಕಾರ ಕೆದಡಿದಾಗ|
ಪ್ಯಾಪಿಲಾನ್  ಮಹಾ ಪಲಾಯನಗೈಯ್ಯಲು; ಕಿರಗೂರಿನ ಗಯ್ಯಾಳಿಗಳು ಕಾರ್ವಲೋಗೆ ಬಡಿದರು, ಜುಗಾರಿ ಕ್ರಾಸಿನಲಿ!
ಈ ಚಿದಂಬರ ರಹಸ್ಯ ಅರಿಯೆನು ನಾನೀಗ|
ಕವಲು ದಾರಿಗಳಲಿ ಕಂಗೆಟ್ಟ ಮನಸಿಗೆ ಕೊನೆಗೂ ಪರ್ವ,
ಮೂಕಜ್ಜಿಯ ಕನಸುಗಳ ಕಂಡ ಕಣ್ಣಿಗೆ ಅದೆಂತದೋ ಗರ್ವ |