Saturday, February 17, 2018

ಪ್ರಿಯಕರನ ತುಂಟಾಟಕೆ ನಾಚಿ ನೀರಾದ ನೀರೆಯರೆಷ್ಟೋ,
ಮುಸ್ಸಂಜೆ ಸಮಯದಲಿ ಆಕಾಶ ಕೆಂಪೇರಿದೆ !

ಗಾಳಿಯ ದಾಳಿಗೆ ಮೊಡಗಳೆಲ್ಲ ಗುಳೆ ಹೊರಡಿವೆ,
ದುಃಖ ದುಮ್ಮಾನಗಳ ಭಾರಕೆ, ಕಣ್ಣೀರ ಮಳೆ ಸುರಿದಿದೆ
ಹಳೆ ವರ್ಷದ ಬೇರು ಭದ್ರವಾಗಿರಲಿ-ಹೊಸ ವರ್ಷದ ಚಿಗುರು ಕುಡಿಯೊಡೆಯಲಿ,
ದುಃಖ-ದುಮ್ಮಾನಗಳೆಲ್ಲ ತರಗೆಲೆಗಳಂತೆ ಉದುರಲಿ-
ಸಂತಸದ ಹೂವರಳಿ ನಗಲಿ |
ಶ್ರಮ-ಪರಿಶ್ರಮದ ಕಾಯಿಯದು ಯಶಸ್ಸಿನ ಹಣ್ಣಾಗಲಿ-
ನವಿರಾದ ತಂಗಾಳಿ ನೆಮ್ಮದಿಯ ಉಸಿರಾಗಲಿ |

ಹೊಸ ವರ್ಷ ಎಲ್ಲರಿಗು ಹಳೆತನ್ನು ಮರೆಸದಿರಲಿ-
ನವ ಚೈತನ್ಯವ ಹೊತ್ತು ತರಲಿ
ಮಳೆ ಹುಯ್ಯುವ ಈ ಸಮಯದಲಿ,
ಒಂಟಿತನದಿ ಮನ ಒಣಗಿ ನಿಂತಿದೆ

ಬೊಗಸೆ ಹಿಡಿದ ಸೋನೆ ಮುತ್ತೆಲ್ಲ ಬೆರಳ ಸಂದಿಯಲಿ ಸೋರಿ ಹರಿದಿದೆ

ಕಣ್ಣ ಮಿಂಚು ಕಾಣದಾಗಿ, ಬರೀ ಗುಡುಗು ಸಿಡಿಲಿನ ಕಿರುಚಾಟ,
ರಾತ್ರಿಯೆಲ್ಲ ರಪ ರಪ ರಾಚುವ ವರುಣನಾರ್ಭಟ ,
ಬಾರದ ನಿದ್ರೆಗೆ ಬದುಕೆಲ್ಲ ಹುಡುಕಾಟ

Monday, December 19, 2016

ಹುಡುಕಾಟ

ಮಲೆಗಳಲಿ ಮದುಮಗಳ ಅರಸಿ ಬಂದವ ನಾನು, ಮನ ಗೆದ್ದವಳು ಮಾತ್ರ ಕಾನೂರು ಹೆಗ್ಗಡತಿ |
ಸಂಗ್ಯ-ಬಾಳ್ಯರ ಹುಚ್ಚೆದ್ದು ಹುಡುಕುವಾಗ, ಗಕ್ಕನೆ ಕಂಡದ್ದು ಸಿಂಗಾರವ್ವನ ಅರಮನೆಯ ಒಡತಿ|
ಘಟಶ್ರಾಧ್ಧದಲಿ ಕಂಡ ನಾಟಕೀಯತೆ ಅರ್ಥವಾದದ್ದು ಸಂಸ್ಕಾರ ಕೆದಡಿದಾಗ|
ಪ್ಯಾಪಿಲಾನ್  ಮಹಾ ಪಲಾಯನಗೈಯ್ಯಲು; ಕಿರಗೂರಿನ ಗಯ್ಯಾಳಿಗಳು ಕಾರ್ವಲೋಗೆ ಬಡಿದರು, ಜುಗಾರಿ ಕ್ರಾಸಿನಲಿ!
ಈ ಚಿದಂಬರ ರಹಸ್ಯ ಅರಿಯೆನು ನಾನೀಗ|
ಕವಲು ದಾರಿಗಳಲಿ ಕಂಗೆಟ್ಟ ಮನಸಿಗೆ ಕೊನೆಗೂ ಪರ್ವ,
ಮೂಕಜ್ಜಿಯ ಕನಸುಗಳ ಕಂಡ ಕಣ್ಣಿಗೆ ಅದೆಂತದೋ ಗರ್ವ |

??

ಮುಂಜಾವಿನ ಮಂಜಿನಲಿ ಮೂಕಜ್ಜಿಯ ಕನಸುಗಳ ಹುಡುಕಿ ಹೊರಟವ ನಾನು |
ಜಟಿಲ ಜೀವನದ ಸರಳಾನುವಾದಕೆ ಬೆರಗಾದೆ!
ಬೆಟ್ಟದ ಜೀವಗಳ ರೋದನೆಗೆ ಚೋಮನ ದುಡಿಯ ದನಿಗೂಡಲು,
ಚಿಗುರಿದ ಕನಸಿನ ಮೇಲೆಯೇ ಅನುಮಾನ|
ಮಣ್ಣಿಗೆ ಮರಳುವುದೇ ಅಂತಿಮ ಸತ್ಯವೆನೆ, ಕನಸು ಕನಸಿನ ನಡುವೇಕೆ ತಾರತಮ್ಯ?
ಕನಸು ಕಾಣುವ ಕಣ್ಣುಗಳು ಬೇರೆ, ಆದರೇನು? ಕನಸಿನ ಚಿತ್ರಪಟ ಬಿಡಿಸುವವ ಒಬ್ಬನೇ ಅಲ್ಲವೇ?

Tuesday, October 25, 2016

ತಾಯ ಎದೆಹಾಲು ಬತ್ತಿಹುದು, ಮಕ್ಕಳಿಬ್ಬರ ನಡುವೆ ಕಿತ್ತಾಟ |
ಕಿವುಡು ಕಂದಮ್ಮಗಳಿವು;
ಹಾಲು ಕುಡಿದ ಬಾಯಿಂದ ಕಕ್ಕುತಿಹವು ಹಾಲಹಲ,
ತಾಯ ಕರುಳ ಕಳವಳ ಕೇಳುವವರಾರಿಲ್ಲ ||

ಕೊಡಗಿನ ಕಾವೇರಿ, ಕರ್ನಾಟಕದ ಕಂದಮ್ಮ;
ಕನ್ನಡ ನಾಡಿನ ಹೆಮ್ಮೆಯ ಮನೆ ಮಗಳು |

ಗಂಡನ ಮನೆ ಸೇರುವುದು ಹೆಣ್ಣು ಜೀವಕೆ ಅನಿವಾರ್ಯ; ಹಾಗೆಂದ ಮಾತ್ರಕೆ, ಅವಳ ಕದಿಯುವುದು ತರವಲ್ಲ|
ತವರು ಖುಷಿಯಿಂದ ಉಡಿ ತುಂಬಿ ಕಳಿಸಿ ಕೊಡಬೇಕಲ್ಲ !

ಸರಿಯಾದ ಸಮಯದಲಿ ಬಿಳ್ಕೊಡುವೆವು ನಾವು, ಅಲ್ಲಿಯವರೆಗೂ ತಾಳ್ಮೆಯಿಂದಿರಿ ನೀವು|

ಮುತ್ತೈದೆ ಭಾಗ್ಯವ ಕಸಿಯೊ ಕೆಟ್ಟವರು ನಾವಲ್ಲ|
ಹೊಸ ಮನೆಯ ಬೆಳಗಿ ತವರು ಕೀರ್ತಿ ಹೆಚ್ಚಿದರೆ, ನಮ್ಮ ಮನಸಿಗೆ ಸಕ್ಕರೆ ಬೆಲ್ಲ |