ಹೌದು ತಪ್ಪು ನನ್ನದೇ !
ನೀ ತಡೆದೆ; ನಾ ಹತ್ತಿರ ಬಂದೆ
ನೀ ಗೆಳತಿಯಾದೆ; ನಾ ಆತ್ಮೀಯಳೆಂದುಕೊಂಡೆ
ಹೌದು ತಪ್ಪು ನನ್ನದೇ !
ಎಲ್ಲವೂ ಸರಿಯಾಗಿತ್ತು(?) ಸುಂದರ ಸ್ವಪ್ನದಂತೆ, ಆ ಸಂಜೆಯವರೆಗೆ
ಅಥವಾ ಆ ನಂಬಿಕೆಯಲ್ಲಿಯೇ ಬೆಚ್ಚಗಿತ್ತು ನಮ್ಮ ಒಡನಾಟದ ನಗೆ
ಹೌದು ಆವತ್ತು ಆ ಗೋಧೂಳಿ ಸಮಯದಂದು;
ನಿನಗೆ ಬೇಕಾಗಿತ್ತು ಸಾಂತ್ವನದ ಹೆಗಲು
ಎಲ್ಲವೂ ಬುಡಮೇಲು ನಾ ಕೈ ಕೊಸರಿಕೊಂಡು ಹೋಗಲು.
ಹೌದು ತಪ್ಪು ನನ್ನದೇ !
ನನ್ನ ಕಾರಣವದು ಸರಿಯಿತ್ತು ನನ್ನ ಸಮರ್ಥನೆಗೆ
ನಿನಗದು ಅರ್ಥವಾಗದೇ? ಯಾಕೆ ಈ ಅಸಮಾಧಾನದ ಹೊಗೆ?
ನನಗೆ ತಿಳಿದಿರಲಿಲ್ಲ ನಿನ್ನ ನೋವಿನ ಆಳವದು ಕಣ್ಣೀರಿನ ಸಾಗರವೆಂದು
ಆ ಸಾಗರದಲೆಗಳ ರಭಸದಲ್ಲಿ ನಿನಗೆ ತಿಳಿಯಲಿಲ್ಲ ನನ್ನ ಅಸಹಾಯಕತೆ ಏನೆಂದು
ಹೌದು ತಪ್ಪು ನನ್ನದೇ !
ನಾ ಮಾತು ಕೊಟ್ಟಿದ್ದೆನಲ್ಲವೇ- ಯಾವುತ್ತೂ ನಿನ್ನ ಕಷ್ಟಕ್ಕಿರುತ್ತೇನೆಂದು
ಮರೆತಿರಬಹುದು ನಾ ಅದನಂದು!
ಮಾರನೆಯ ದಿನ ಸಿಕ್ಕಿತ್ತು ನನಗೆ ಮರೆವಿನ ಮರುತ್ತರ
ಕೇಳದ ಪ್ರಶ್ನೆಗೆ ಬಯಸದ ಉತ್ತರ
ನೀ ಎದ್ದು ಹೊರಟು ನಡೆದೆ ಹೇಳದೇ-ಕೇಳದೇ
ನಾ ಕುಸಿದು ಬಿದ್ದೆ ಕಾರಣ ತಿಳಿಯದೇ
ಹೌದು ತಪ್ಪು ನನ್ನದೇ !
ಕಾರಣ ಕೇಳುತ್ತಿರುವೆನಲ್ಲ !, ನಾನೆಷ್ಟು ಹುಚ್ಚ
ನಿನ್ನ ಮರಳುವಿಕೆಗಾಗಿ ಕಾದಿರುವೆನಲ್ಲ; ತಪ್ಪು ನನ್ನದೇ !
No comments:
Post a Comment